ಎಲ್ಲೆಡೆ ಸಂಭ್ರಮದ ಸುಬ್ರಹ್ಮಣ್ಯ ಷಷ್ಠಿ ಹಬ್ಬ ಆಚರಣೆ

Oplus_131072
Oplus_131072
Published on

ಯಳಂದೂರು: ಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತ ಶನಿವಾರ ಸಂಭ್ರಮ ಸಡಗರದಿಂದ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಆಚರಿಸಲಾಯಿತು.

ಹಬ್ಬದ ನಿಮಿತ್ತ ಬೆಳಗ್ಗೆಯಿಂದಲೇ ಈಶ್ವರ ದೇಗುಲ, ನಾಗರ ಕಲ್ಲುಗಳು ಹಾಗೂ ಹುತ್ತಕ್ಕೆ ಭಕ್ತರು ಹೂವು, ಹಣ್ಣು, ಹಾಲು ಎರೆದು ಭಕ್ತಿ ಮೆರೆದರು. ಸರದಿ ಸಾಲಿನಲ್ಲಿ ಭಕ್ತರು ಪೂಜೆಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಲಿನೊಂದಿಗೆ ಕೋಳಿ, ಮೊಟ್ಟೆ ಅರ್ಪಿಸಿದ ಭಕ್ತರು: ಕೆಲವೆಡೆ ಹುತ್ತದ ಬಾಯಿಗೆ ಭಕ್ತರು ಕೋಳಿಗಳನ್ನು ಬಲಿ ಕೊಟ್ಟು ಕತ್ತುಗಳನ್ನು ಅದರೊಳಗೆ ಇಡುತ್ತಿದ್ದರೆ, ಕೆಲವರು ಮೊಟ್ಟೆಗಳನ್ನು ಹುತ್ತದೊಳಗೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಕೆಲವೆಡೆ ಇನ್ನೂ ಆಚರಣೆಯಲ್ಲಿದೆ. ಹಾವಿಗೆ ಹಾಲೆರೆದು ಹಣ್ಣು ಕಾಯಿ, ಅರಿಶಿಣ, ಕುಂಕುಮ, ಎಲೆ ಅಡಕೆ ಇಡುವುದು ಸಾಮಾನ್ಯ ಸಂಪ್ರದಾಯವಾಗಿದೆ. ಆದರೆ ಹುತ್ತದ ಬಾಯಿಗೆ ಕೋಳಿ ಮೊಟ್ಟೆ ಇಡುವುದು, ಕೋಳಿಗಳ ಕತ್ತನ್ನು ಕೊಯ್ದು ಬಿಸಿ ರಕ್ತವನ್ನು ಹುತ್ತದ ಬಾಯಿಗೆ ಹಾಕಿ, ಅದರ ಕತ್ತನ್ನು ಹುತ್ತದ ಬಾಯಿಯೊಳಗೆ ಇಟ್ಟು ಮುಂಡವನ್ನು ತೆಗೆದುಕೊಂಡು ಹೋಗಿ ಅಡುಗೆ ಮಾಡಿ ತಿನ್ನುವ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಕೆಲವಡೆ ಇನ್ನೂ ಇದೆ.

ಸುಬ್ರಹ್ಮಣ್ಯ ಷಷ್ಠಿಯ ನಿಮಿತ್ತ ಪಟ್ಟಣದ ಗೌರೇಶ್ವರ ದೇಗುಲ, ಇದರ ಬಳಿಯಲ್ಲೇ ಇರುವ ಮಂಟಪದ ನಾಗರಕಲ್ಲು ಸೇರಿದಂತೆ ತಾಲೂಕಿನ ಕಂದಹಳ್ಳಿ, ಸಂತೆಮರಹಳ್ಳಿಯ ಮಹದೇಶ್ವರ ದೇಗುಲದಲ್ಲಿ ಹಬ್ಬದ ನಿಮಿತ್ತ ನೂರಾರು ಭಕ್ತರು ದೇವರ ದರ್ಶನ ಪಡೆದರು. ಈ ದೇಗುಲಗಳಲ್ಲಿ ಹಬ್ಬದ ನಿಮಿತ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net