

ಚಾಮರಾಜನಗರ: ಜಿಲ್ಲಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕಡೆಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು.
ತಾಲೂಕಿನ ಕುದೇರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಮಹಿಳೆಯರಿಗೆ ಕಾನೂನಿನ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು, ಇವುಗಳ ಸದುಪಯೋಗ ಪಡೆದುಕೊಂಡಾಗ ಮಾತ್ರ ದೌರ್ಜನ್ಯಗಳನ್ನು ತಡೆಯಲು ಸಾಧ್ಯ ಎಂದರು. ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಎಲ್ಲಾ ರಂಗಗಳಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಎಷ್ಟೇ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಮಹಿಳೆಯರಿಗಿರುವ ಕಾನೂನುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಎಂ.ಗಿರಿಜಾ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸುವ ಮೂಲಕ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತಿದ್ದಾರೆ. ಮಹಿಳೆಯರು ಶತಮಾನಗಳಿಂದ ಇತಿಹಾಸ ಸೃಷ್ಟಿಸಿದ್ದಾರೆ. ಹೆಣ್ಣು ಎಂಬ ಕೀಳಿರಿಮೆ ಬಿಟ್ಟು ಎಲ್ಲ ರಂಗದಲ್ಲೂ ಶ್ರಮವಹಿಸಿದರೆ ಯಶಸ್ಸು ಕಾಣಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ತರಬೇತಿ ಸಂಯೋಜಕ ಟಿ. ಜೆ. ಸುರೇಶ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಥಿಯೊಡರ್ ಲೂಥರ್, ಉಪನ್ಯಾಸಕರಾದ ಡಾ. ಶಶಿಕಲಾ, ಶಿವಕುಮಾರ್, ದಿಲೀಪ್, ಬಸವಣ್ಣ, ಲಿಂಗರಾಜು, ವಾಣಿ, ಅಶೋಕ್, ಕು. ಸಿಂಧು ಇದ್ದರು.
ಕೋಡಿಮೋಳೆ ಶಾಲೆಯಲ್ಲಿ ಮಹಿಳಾ ದಿನಾಚರಣೆ
ಚಾಮರಾಜನಗರ: ತಾಲೂಕಿನ ಕೋಡಿಮೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಹಿಳಾ ದಿನ ಆಚರಣೆ ಅಂಗವಾಗಿ ಶಿಕ್ಷಕಿಯರಿಗೆ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಬಲೂನ್ ಆಟ, ಕೈ ಬಳಸದೆ ಬಿಸ್ಕೆಟ್, ಬಾಳೆಹಣ್ಣು ಸುಲಿದು ತಿನ್ನುವ ಸ್ಪರ್ಧೆಗಳಲ್ಲಿ ಶಿಕ್ಷಕಿಯರು ಪಾಲ್ಗೊಂಡರು. ನಂತರ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಶಿಕ್ಷಕರಾದ ಮಲ್ಲು, ಮನೋಜ್ ಮಸು, ಶಾರದಂಬ, ತೇಜವತಿ, ಪುಷ್ಪಲತಾ, ಶೋಭಾ, ಪುಷ್ಪಲತಾ ಅಡುಗೆ ಸಿಬ್ಬಂದಿ ಮಲ್ಲಮ್ಮ, ನಂಜಮ್ಮಣ್ಣಮ್ಮ, ನಂದಿನಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.