

ಯಳಂದೂರು: ತಾಲೂಕಿನಾದ್ಯಂತ ಮಳೆ ಆರ್ಭಟ ಹೆಚ್ಚಾಗಿದ್ದು, ಎಲ್ಲೆಲ್ಲೂ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಗುಂಬಳ್ಳಿ ಗ್ರಾಮದ ಕೆರೆ ಏರಿ ಒಡೆದಿದ್ದು, ನೂರಾರು ಎಕರೆ ಫಸಲು ಕೊಚ್ಚಿಹೋಗಿದೆ. ತಗ್ಗು ಪ್ರದೇಶಗಳ ನೂರಾರು ಮನೆಗಳು ಜಲಾವೃತಗೊಂಡಿವೆ.
ಸುವರ್ಣಾವತಿ ನದಿ ಉಕ್ಕಿ ಹರಿಯುತ್ತಿದ್ದು ಮಂಗಳವಾರ ಏಕಾಏಕಿ ನೀರು ಏರಿಕೆಯಾದ್ದರಿಂದ ತಾಲೂಕಿನ ಮಾಂಬಳ್ಳಿ ಗ್ರಾಮದ ಪೊಲೀಸ್ ಠಾಣೆಗೆ ನೀರು ನುಗ್ಗಿದೆ. ಇಲ್ಲಿನ ಸಿಬ್ಬಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್‌ನಲ್ಲಿ ಹೊರಗೆ ಕರೆದು ತಂದಿದ್ದಾರೆ. ಮಾಂಬಳ್ಳಿ ಗ್ರಾಮದ ಒಳಗೆ ನೀರು ನುಗ್ಗಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ. ಶೆಡ್‌ನಲ್ಲಿದ್ದ ಲಕ್ಷಾಂತರ ರೂ. ಬೆಲೆಯ ಸಿಲ್ಕ್ ವೇಸ್ಟ್ ನೀರಿನಲ್ಲಿ ಕೊಚ್ಚಿ ಹೋಗಿದೆ.
ತಾಲೂಕಿನ ಗುಂಬಳ್ಳಿ ಗ್ರಾಮದ ಕೆರೆಯ ಏರಿ ಒಡೆದಿದ್ದು, ಉಪ್ಪಿನಮೋಳೆ ಗ್ರಾಮದ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿನ ಸಿಬ್ಬಂದಿ ಕೆಲ ಕಾಲ ಜಲದಿಗ್ಬಂಧನಕ್ಕೆ ಒಳಗಾದರು. ಇದಲ್ಲದೆ ಪ್ರಸಿದ್ಧ ಕೃಷ್ಣಯ್ಯನಕಟ್ಟೆ (ಹೊಸಹಳ್ಳಿ ಕೆರೆ) ತುಂಬಿದ್ದು, ಕೋಡಿ ಬಿದ್ದಿದೆ. ಕಂದಹಳ್ಳಿ, ಅಂಬಳೆ, ವೈ.ಕೆ.ಮೋಳೆ, ಗಣಿಗನೂರು, ಬೂದಿತಿಟ್ಟು, ಚಾಮಲಾಪುರ, ಯರಿಯೂರು, ಅಗರ, ಮಾಂಬಳ್ಳಿ, ಮದ್ದೂರು, ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರೀ ಪ್ರವಾಹ ಬಂದಿದ್ದು, ಗ್ರಾಮದ ಮನೆಗಳಿಗೆ ಹಾನಿಯಾಗಿದೆ.
ಯಳಂದೂರು ಪಟ್ಟಣದ ಮಧ್ಯಭಾಗದಲ್ಲಿ ಹರಿದು ಹೋಗುವ ಸುವರ್ಣಾವತಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಬಂದಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜು, ಜೆಎಸ್‌ಎಸ್ ಕಾಲೇಜು, ಸುವರ್ಣಾ ತಿರುಮಲ ದೇಗುಲ, ಕಂದಹಳ್ಳಿ, ಮಹದೇಶ್ವರ ದೇಗುಲ, ಅರಣ್ಯ ಇಲಾಖೆ, ಪಟ್ಟಣದ ಸಂತೇಮಾಳ, ಮೊತ್ತದ ಕೇರಿ, ಕುಂಬಾರಗುಂಡಿ, ದಾಸಿಗೇರಿ, ಕಾರಾಪುರ ವಿರಕ್ತಮಠ ಸೇರಿದಂತೆ ಬಹುತೇಕ ಎಲ್ಲ ಕಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಪ್ರವಾಹದಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಕೊಳ್ಳೇಗಾಲದಿಂದ ಯಳಂದೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
ಶಾಸಕರು, ಅಧಿಕಾರಿಗಳ ತಂಡ ಭೇಟಿ: ಶಾಸಕ ಎನ್. ಮಹೇಶ್ ಮಂಗಳವಾರ ಮಾಂಬಳ್ಳಿ, ಯಳಂದೂರು, ಬೂದಿತಿಟ್ಟು, ಗಣಿಗನೂರು ಸೇರಿದಂತೆ ಅನೇಕ ಕಡೆಗೆ ಭೇಟಿ ನೀಡಿ ಪರಿಶೀಲಿಸಿದರು. ಮನೆ, ಕೃಷಿ ಫಸಲು ಕಳೆದುಕೊಂಡ ರೈತರಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಹೇಳಿದರು. ಉಪವಿಭಾಗಾಧಿಕಾರಿ ಗೀತಾ ಹುಡೇದ, ಡಿವೈಎಸ್ಪಿ ನಾಗರಾಜು, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಇತರರು ಇದ್ದರು.