

ಕಲಬುರಗಿ: ಜಿಲ್ಲೆಯಲ್ಲಿ ಕರೊನಾದ ಮಧ್ಯೆಯೂ ಎಳ್ಳಮಾವಾಸ್ಯೆಯನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು. ಗುರುವಾರ ಸಂಕ್ರಮಣ ಹಬ್ಬ ನಡೆಯಲಿದೆ.
ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಜನರು ಸಹ ಭೋಜನೆ ಮಾಡಿದರು. ಪ್ರಾಣಿ ಸಂಗ್ರಹಾಲಯದಲ್ಲಿ ಊಟಕ್ಕೆ ಬರುವವರನ್ನು ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷಿಸಿ ಮತ್ತು ಸ್ಯಾನಿಟೈಸರ್ ನೀಡಿ ಒಳಗೆ ಬಿಡಲಾಯಿತು.
ನಗರ ಪ್ರದೇಶದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ ಕಾಣದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ರೈತರು ಹೊಲಗಳಲ್ಲಿ ಭೋಜನ ಸೇವಿಸಿ ಹಬ್ಬ ಆಚರಿಸಿದರು.
ಭೋಗಿ ಹಬ್ಬಕ್ಕೆ ಬಳಕೆಯಾಗುವವ ಕಬ್ಬು, ಸುಲಗಾಯಿ (ಹಸಿ ಕಡಲೆ ಗಿಡ), ಪೇರಲ ಹಣ್ಣು, ಬಾರಿಕಾಯಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇನ್ನು ತರಕಾರಿಗಳಾದ ಬದನೆಕಾಯಿ,ಅವರೆಕಾಯಿ,ಗಜ್ಜರಿ, ಸೌತೆಕಾಯಿ, ಭಜಿ ಪಲ್ಲೆ, ಮೆಂತೆಪಲ್ಲೆ, ಪುಂಡಿ ಪಲ್ಲೆ ಮೊದಲಾದ ತೊಪ್ಪಲು ಪಲ್ಲೆಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಬುಧವಾರ ಜಿಲ್ಲಾಧ್ಯಂತೆ ಮಹಿಳೆಯರು ಭೋಗಿ ಆಚರಿಸಿದರು.
ಹಬ್ಬದ ನಿಮಿತ್ತ ನಗರದ ಸೂಪರ್ ಮಾರುಕಟ್ಟೆ, ಕೋಟನೂರು ಬಳಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ಕೇಂದ್ರ ಬಸ್ ನಿಲ್ದಾಣ ಬಳಿಯ ಕಣ್ಣಿ ಮಾರುಕಟ್ಟೆ, ರಾಮಮಂದಿರ ಬಳಿಯ ಬಯಲು ಮಾರುಕಟ್ಟೆಯಲ್ಲಿ ಹೆಚ್ಚಿನ ಜನಜಂಗುಳಿ ಕಂಡು ಬಂದಿತು.ಹಬ್ಬದ ಸೀಸನ್ ಆದ್ದರಿಂದ ಕಾಯಿ ಪಲ್ಲೆ ಹಣ್ಣುಗಳ ದರ ಹೆಚ್ಚಾಗಿತ್ತು.