

ಗುಂಡ್ಲುಪೇಟೆ: ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಅದ್ದೂರಿಯಾಗಿ ನನ್ನ ನಾಡು- ನನ್ನ ಹಾಡು, ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾಹಿತ್ಯ ಪರಿಷತ್ತು, ಶಾಲಾ- ಕಾಲೇಜು, ಕನ್ನಡ ಪರ ಸಂಘಟನೆಗಳು, ಸಂಸ್ಥೆಗಳಲ್ಲಿ ಏಕಕಾಲಕ್ಕೆ ಐದು ಸಾವಿರ ವಿದ್ಯಾರ್ಥಿಗಳು ಆಯ್ದ ಆರು ಹಾಡುಗಳನ್ನು ಹಾಡುವ ಮೂಲಕ ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಿಸಿದರು. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಹುಯಿಲಗೋಳ ನಾರಾಯಣರಾವ್ ಅವರ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಚೆನ್ನವೀರ ಕಣವಿ ಅವರ ವಿಶ್ವ ವಿನೂತನ, ಡಿ.ಎಸ್. ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ಹಂಸಲೇಖ ಬರೆದ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುವ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಹಿರಿಮೆ, ಗರಿಮೆಯನ್ನು ಬಿಂಬಿಸಿದರು.
ಶಾಸಕ ನಿರಂಜನ್‌ಕುಮಾರ್ ಮಾತನಾಡಿ, ಕನ್ನಡದ ಬಗ್ಗೆ ಹಲವು ಕವಿಗಳು ಕಾವ್ಯ, ಹಾಡುಗಳನ್ನು ಬರೆಯುವ ಮೂಲಕ ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದ್ದಾರೆ. ಕನ್ನಡದ ಕಂಪು ಎಲ್ಲ ಕಡೆ ರಾರಾಜಿಸಲಿ ಎನ್ನುವ ದೃಷ್ಟಿಯಿಂದ ಸರ್ಕಾರ ಕನ್ನಡ ಕೋಟಿ ಕಂಠ ಗಾಯನ ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ನಾಗೇಶ್, ಕುಮಾರ್, ತಹಸೀಲ್ದಾರ್ ರವಿಶಂಕರ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶ್ರೀಕಂಠರಾಜೇ ಅರಸ್, ಕ್ಷೇತ್ರ ಶಿಕ್ಷಣಧಿಕಾರಿ ಶಿವಮೂರ್ತಿ, ಇತರರು ಇದ್ದರು.