ಎಲ್ಲೆ ಮೀರಿದ ಮದ್ಯ ಅಕ್ರಮ ಮಾರಾಟ

FotoJet (3)
Published on

ಕೈಚೆಲ್ಲಿದ ಸರ್ಕಾರ | ಅಸಹಾಯಕರಾಗಿದ್ದೇವೆ ಎಂದ ಶಾಸಕ ಪುಟ್ಟಸ್ವಾಮಿಗೌಡ

ಗೌರಿಬಿದನೂರು : ತಾಲೂಕು ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಮದ್ಯ ಅಕ್ರಮ ಮಾರಾಟ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಇರುವುದೇ ಕಾರಣ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅಸಹಾಯಕತೆ ವ್ಯಕ್ತಪಡಿಸಿದರು.

ನಗರದ ಹೊರವಲಯದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಮದ್ಯ ಮಾರಾಟದಿಂದಲೇ ಸರ್ಕಾರಕ್ಕೆ ಹೆಚ್ಚು ತೆರಿಗೆ ಬರುವುದರಿಂದ ಸರ್ಕಾರ ಕೈಚೆಲ್ಲಿದೆ. ಆದ್ದರಿಂದ ಮದ್ಯ ಅಕ್ರಮ ಮಾರಾಟ ಅಧಿಕಾರಿಗಳ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಡಿವಾಣ ಹಾಕಲು ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜನರ ಸಮಸ್ಯೆಗೆ ಸ್ಪಂದಿಸಿ

ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿ ಹೆಸರು ಸಂಪಾದಿಸಬೇಕು ಎಂದು ಸಲಹೆ ನೀಡಿದ ಶಾಸಕರು, ತಾಲೂಕಿನ ರೈತರು, ಬಡಜನರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸಲಾಗುತ್ತಿದೆ. ಇಂದು ಸುಮಾರು 50 ದೂರು ಸಲ್ಲಿಕೆಯಾಗಿವೆ. ಇವುಗಳಲ್ಲಿ ಸ್ಮಶಾನ ಜೋಡಿ ಗ್ರಾಮ ಖಾತೆಗಳ ಸಮಸ್ಯೆ, ಜಮೀನುಗಳ ಸಮಸ್ಯೆಗಳು ಬಂದಿವೆ. ಕಾನೂನು ತೊಡಕು ಇರುವ ಸಮಸ್ಯೆ ಹೊರತುಪಡಿಸಿ ಶೇ.80 ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಪ್ರತಿ ತಿಂಗಳು ಹೊಸ ಸಮಸ್ಯೆಗಳು ತಾಲೂಕಿನಲ್ಲಿ ಉದ್ಬವಿಸುವುದು ಸಾಮಾನ್ಯ. ಅಧಿಕಾರಿಗಳು ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಸ್ಪಂದಿಸಬೇಕು ಮತ್ತು ಕಚೇರಿಗಳಿಗೆ ಜನರನ್ನು ಅಲೆದಾಡಿಸುವುದನ್ನು ತಪ್ಪಿಸಬೇಕು ಎಂದು ನಿರ್ದೇಶಿಸಿದರು. ಎತ್ತಿನ ಹೊಳೆ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಎರಡು ವರ್ಷದೊಳಗೆ ನೀರು ಹರಿಸಿ, ತಾಲೂಕಿನ ಜನರ ನೀರಿನ ಬವಣೆ ನೀಗಿಸಲಾಗುವುದು ಎಂದು ಪುಟ್ಟಸ್ವಾಮಿಗೌಡ ತಿಳಿಸಿದರು.

ಜೋಡಿ ಗ್ರಾಮ ಸಮಸ್ಯೆಗೆ ಶೀಘ್ರ ಪರಿಹಾರ

ತಹಸೀಲ್ದಾರ್ ಎಸ್.ಮಹೇಶ್ ಪತ್ರಿ ಮಾತನಾಡಿ, ತಾಲೂಕಿನ ಕೃಷ್ಣರಾಜಪುರ, ಹುಣಸೇನಹಳ್ಳಿ, ಕೋಡಿಹಳ್ಳಿ ಜೋಡಿ ಗ್ರಾಮಗಳ ಸಮಸ್ಯೆಯನ್ನು ಕಾನೂನು ಪ್ರಕಾರ ಇತ್ಯರ್ಥ ಮಾಡಲು ಪ್ರಯತ್ನಿಸಲಾಗುತ್ತಿದೆ. ಎಲ್ಲ ದಾಖಲೆಗಳು ರೈತರ ಹೆಸರಿನಲ್ಲೇ ಇದ್ದರೂ ಅಧಿಕಾರಿಗಳ ವರ್ಗಾವಣೆಯಿಂದಾಗಿ ಕೆಲಸ ವಿಳಂಬವಾಗುತ್ತಿದೆ. ಶೀಘ್ರದಲ್ಲೆ ಪರಿಹಾರ ನೀಡುವುದಾಗಿ ಹೇಳಿದರು.

ತಾಪಂ ಇಒ ಜಿ.ಕೆ. ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ ಶ್ರೀನಿವಾಸ್ ಮೂರ್ತಿ, ಅಬಕಾರಿ ನಿರೀಕ್ಷಕ ಮಂಜುನಾಥ್, ಕೃಷಿ ಅಧಿಕಾರಿ ಮೋಹನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net