

ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಿಂದಾಗಿರುವ ಸಾವು-ನೋವು ದುರ್ಘಟನೆ ಮತ್ತೆಂದಿಗೂ ಯಾವುದೇ ಪ್ರದೇಶದಲ್ಲಿ ಮರುಕಳಿಸಬಾರದು ಎಂದು ಪೌರಾಡಳಿತ ಸಚಿವ ಎಂ.ರಹೀಂ ಖಾನ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ನೀರು ಪೂರೈಕೆ ಪೈಪ್‌ಲೈನ್ ಸ್ಥಿತಿಗತಿ ಪರಿಶೀಲಿಸಬೇಕು. ಲೀಕೇಜ್ ಇದ್ದರೆ ಕೂಡಲೇ ಸರಿಪಡಿಸಬೇಕು. ಸರ್ಕಾರ ಈ ದುರ್ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಘಟನೆ ಕಾರಣಗಳನ್ನು ತಜ್ಞರ ತಂಡ ಸಮಗ್ರ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಎಸ್‌ಪಿ ಕೆ.ಪರಶುರಾಮ್ ಮಾತನಾಡಿ, ಮರಣೋತ್ತರ ಪರೀಕ್ಷೆ ಹಾಗೂ ಉಳಿದ ಎಫ್‌ಎಸ್‌ಎಲ್ ಪರೀಕ್ಷಾ ವರದಿಗಳು ಕೈ ಸೇರಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಮಾತನಾಡಿ, ಘಟನೆಗೆ ಕಾರಣವಾದ ಅಂಶಗಳು ಹಾಗೂ ಸಮೀಕ್ಷೆಗೆ ರಾಜ್ಯದಿಂದ ತಜ್ಞ ವೈದ್ಯರ ತಂಡ ಸರ್ವೇ ನಡೆಸಿದ್ದು, ದುರ್ಘಟನೆ ಮರುಕಳಿಸದಂತೆ ಸಲಹೆ ಪಡೆದು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಚಿತ್ರದುರ್ಗ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿ, ಕೆಲವೆಡೆ ಆಗಿರುವ ಅನಧಿಕೃತ ನಳದ ಸಂಪರ್ಕಗಳ ಕುರಿತಂತೆ ಸಭೆಯ ಗಮನ ಸೆಳೆದರು.
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಮಂಜುಶ್ರೀ, ಎಡಿಸಿ ಬಿ. ಟಿ.ಕುಮಾರಸ್ವಾಮಿ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎಂ.ಚಂದ್ರಪ್ಪ, ಡಿಎಚ್‌ಒ ಡಾ.ಆರ್. ರಂಗನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಇತರರಿದ್ದರು.
*ಕೋಟ್
ಕವಾಡಿಗರಹಟ್ಟಿ ಪ್ರಕರಣ ಅತ್ಯಂತ ಗಂಭೀರವಾಗಿದೆ. ನಿವಾಸಿಗಳಿಗೆ ಸಮರ್ಪಕವಾಗಿ ಆಹಾರ, ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಪರಿಹಾರದ ಮೊತ್ತ, ಮೃತರ ವಾರಸುದಾರರಿಗೆ ತಲುಪಿರುವ ಕುರಿತಂತೆ ಅಧಿಕಾರಿಗಳು ಖಾತ್ರಿ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಅವರ ಮಕ್ಕಳು ಅಥವಾ ವಾರಸುದಾರರಿಗೆ ಉತ್ತಮ ಬದುಕು ಕಲ್ಪಿಸಬೇಕು.
ಕೆ.ಸಿ.ವೀರೇಂದ್ರ, ಶಾಸಕ
*ಕೋಟ್
ನಗರ, ಪಟ್ಟಣ ಪ್ರದೇಶಗಳಲ್ಲಿ ಹೊಸದಾಗಿ ರಚನೆಯಾಗುವ ಲೇಔಟ್‌ಗಳಲ್ಲಿ ಪೈಪ್‌ಲೈನ್, ಪಾರ್ಕ್, ಡ್ರೈನೇಜ್, ರಸ್ತೆ ಇತ್ಯಾದಿ ಸೌಕರ್ಯಗಳನ್ನು ಪರಿಶೀಲಿಸದೆಯೆ ಪ್ರಾಧಿಕಾರಗಳು ಅನುಮತಿ ನೀಡುತ್ತಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಎಂ.ಚಂದ್ರಪ್ಪ, ಶಾಸಕ
*ಕೋಟ್
ನಗರ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಜಂಟಿ ಪರಿಶೀಲನೆ ಬಳಿಕವೇ ಲೇಔಟ್‌ಗಳಿಗೆ ಅನುಮತಿ ನೀಡುವ ಕುರಿತಂತೆ ನಿಯಮ ರೂಪಿಸಲಾಗುವುದು.
ಎ.ರಹೀಂ ಖಾನ್, ಪೌರಾಡಳಿತ ಸಚಿವ
*ಕೋಟ್
ಹೆಸರಿಗಷ್ಟೇ ಟ್ಯಾಂಕ್‌ಗಳ ಸ್ವಚ್ಛತೆ ಮಾಡಿದ್ದೇವೆ ಎಂದು ಹೇಳಿ ಖರ್ಚು ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಸದ್ಯದಲ್ಲೇ ಸುತ್ತೋಲೆಯನ್ನು ಹೊರಡಿಸಲಿದೆ. ನಾಮಾಕವಾಸ್ಥೆ ಕೆಲಸ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
ಮಂಜುಶ್ರೀ, ನಿರ್ದೇಶಕಿ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು