ಗ್ಯಾರಂಟಿಗಳಿಂದಾಗಿ ಸಚಿವರಿಗೆ ಮಾತನಾಡಲಾಗುತ್ತಿಲ್ಲ

IMG-20230603-WA0039-0001
Published on

ಕಾಂಗ್ರೆಸ್ಸಿಗೆ ಸಾಲ ಎಲ್ಲಿಂದ ತರುವುದೆಂಬ ಚಿಂತೆ ಯುವ ಜನರಿಗೆ ವಂಚನೆ, ಡಕೋಟ ಬಸ್‌ಗಳಲ್ಲಿ ಫ್ರೀ ಕೇಂದ್ರ ಸಚಿವ ಟೀಕೆ
ಚಿತ್ರದುರ್ಗ: ತನ್ನ ಅಂದಿನ ಸಿದ್ಧಾಂತಗಳನ್ನು ಧಿಕ್ಕರಿಸಿ ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿಗಳಿಂದ ಬಿಜೆಪಿ ವಿಚಲಿತವಾಗಿಲ್ಲ. ಇವುಗಳಿಗೆ ಹೇಗೆ ಹಣ ಹೊಂದಿಸುವುದು? ಎಲ್ಲಿಂದ ಸಾಲ ತರುವುದು ಎಂಬುದರ ಕುರಿತಂತೆ ಕಾಂಗ್ರೆಸ್ ಪಕ್ಷಕವೇ ವಿಚಲಿತವಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿಗಳಿಂದಾಗಿ ಸಿದ್ದರಾಮಯ್ಯ ಸಂಪುಟ ಸದಸ್ಯರಿಗೆ ಖಾತೆಗಳ ಬಗ್ಗೆ ಮಾತನಾಡಲು ಸಾಧ್ಯವಾಗಿಲ್ಲ. ಗ್ಯಾರಂಟಿಗಳೆಡೆ ಸ್ಪಷ್ಟ ಚಿತ್ರಣವನ್ನು ಕೊಡಲು ಸರ್ಕಾರ ವಿಫಲವಾಗಿದೆ. ಡಕೋಟಾ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಟೀಕಿಸಿದರು.
ಯುವ ನಿಧಿ ಪ್ರಸಕ್ತ ಶೈಕ್ಷಣಿಕ ಸಾಲಿನ ಪದವೀಧರರಿಗೆಂದು ಹೇಳುವ ಮೂಲಕ ಯುವ ಜನರಿಗೆ ಮಂಕುಬೂದಿ ಎರಚಲಾಗಿದೆ. 200 ಯೂನಿಟ್ ಫ್ರೀ ವಿದ್ಯುತ್ ಬಗ್ಗೆ ಗೊಂದಲಗಳಿದ್ದು, ಕಾಂಗ್ರೆಸ್ಸಿನ ನಯವಂಚನೆ ಅರಿತು ಜನರೇ ಬೀದಿಗೆ ಇಳಿಯಲಿದ್ದಾರೆ. ಒಳ ಮೀಸಲಿನ ಕುರಿತಂತೆ ಅನೇಕ ರಾಜ್ಯಗಳಲ್ಲಿ ಸಾಕಷ್ಟು ಕೂಗಿದೆ. ಹೋರಾಟಕ್ಕೆ ಸ್ಪಂದಿಸಿ ಬಿಜೆಪಿ ಒಳ ಮೀಸಲಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಬಿಜೆಪಿ, ಸಂಘ ಪರಿವಾರಕ್ಕೆ ಸಾಮಾಜಿಕ ನ್ಯಾಯ ಮುಖ್ಯವೇ ಹೊರತು ಚುನಾವಣೆಯ ಸೋಲು-ಗೆಲುವು ಅಲ್ಲ. ಸಮಗ್ರ ಅಧ್ಯಯನದ ವರದಿ ಫೈನಲ್ ಆದ ಬಳಿಕ ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕೋವಿಡ್, ರಷ್ಯಾ-ಉಕ್ರೇನ್ ಯುದ್ಧ ಹಾಗೂ ಕಚ್ಛಾ ತೈಲ ದರದಿಂದ ದುಬಾರಿಯಾಗಿರುವ ಅಡುಗೆ ಅನಿಲ ದರ ಹೊರೆ ಕಡಿತಗೊಳಿಸಲು ಕೇಂದ್ರ ಪ್ರಯತ್ನಿಸಲಿದೆ. ಪ್ರಧಾನಿ ನರೇಂದ್ರ ಮೋದಿ 9 ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ ಎಂದರು.
ಪಿಎಂ ಆವಾಸ್, ಎಸ್‌ಬಿಎಂ, ಉಜ್ವಲ, ಕಿಸಾನ್ ಸಮ್ಮಾನ್, ರಸಗೊಬ್ಬರ ಸಮಸ್ಯೆ ನಿವಾರಣೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 75ಕ್ಕೆ ಹೆಚ್ಚಿಸಿರುವುದು. ಉನ್ನತ ಶಿಕ್ಷಣಕ್ಕೆ ಒತ್ತು, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗೆ ತೆರೆ ಎಳೆಯಲಾಗಿದೆ. ರಾಮಮಂದಿರ ನಿರ್ಮಾಣ, ಮುದ್ರಾ, ಸ್ವನಿಧಿ ಜಲಜೀವನ್ ಮಿಷನ್ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಬಿಜೆಪಿಯದ್ದಾಗಿದೆ ಎಂದು ಹೇಳಿದರು.
ನನ್ನ ಇಲಾಖೆಯಿಂದ ಪ್ರತಿ ವರ್ಷ 3 ಸಾವಿರ ಪರಿಶಿಷ್ಟ ಜಾತಿ ಯುವ ಜನರಿಗೆ ಸೆಂಟ್ರಲ್ ಯೂನಿವರ್ಸಿಟಿಗಳಲ್ಲಿ ಐಎಎಸ್ ಕೋಚಿಂಗ್ ನೀಡಲಾಗುತ್ತಿದೆ. ಇದಕ್ಕಾಗಿ ಮಾಸಿಕ 4 ಸಾವಿರ ರೂ. ವಿದ್ಯಾರ್ಥಿ ವೇತನಕ್ಕೂ ಆದೇಶಿಸಿದ್ದೇನೆ. ಕೈಗಾರಿಕೋದ್ಯಮಿಗಳಿಗಾಗಿ ಬಡ್ಡಿ ದರ ಕಡಿತ ಗೊಳಿಸಲಾಗಿದೆ. ದಲಿತ ಯುವಕರಿಗೆ 60 ಸಾವಿರ ರೂ. ಸಬ್ಸಿಡಿಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾರಿಗೆ ವಾಹನಗಳನ್ನು ಒದಗಿಸಲಾಗುವುದು ಎಂದರು.
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಜೂ.30ರವರೆಗೆ ರಾಜ್ಯದಲ್ಲಿ ವಿಕಾಸ ತೀರ್ಥ ಯಾತ್ರೆ ಅಭಿಯಾನ ನಡೆಯಲಿದೆ. ಜೂ.23ರಂದು ಪ್ರಧಾನಿ ಅವರು ಕಾರ್ಯಕರ್ತರ ಡಿಜಿಟಲ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ನರೇಂದ್ರ ಹೊನ್ನಾಳ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ವೆಂಕಟೇಶ್ ಯಾದವ್, ಹಾಲಸ್ವಾಮಿ ಇದ್ದರು.

*ಕೋಟ್
ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎಡವಿದ್ದಾರೆ.
ಕೆ.ಎಸ್.ನವೀನ್, ಎಂಎಲ್‌ಸಿ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net