

ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ಪ್ರೌಢಶಾಲಾ ಕನ್ನಡ ಮತ್ತು ಆಂಗ್ಲಭಾಷಾ ಶಿಕ್ಷಕರ ಎರಡು ದಿನಗಳ ಪುನಶ್ಚೇತನ ಕಾರ್ಯಾಗಾರ ಸುತ್ತೂರು ಕ್ಷೇತ್ರದಲ್ಲಿ ಬುಧವಾರ ಆರಂಭವಾಯಿತು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ.ರಾಜಶೇಖರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಯುವ ಮನಸ್ಸುಗಳು ಮುಕ್ತವಾಗಿದ್ದಾಗ ಮಾತ್ರ ಕಲಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ನಮಗೆ ಎಲ್ಲವೂ ಗೊತ್ತಿದೆ ಎಂದುಕೊಂಡರೆ ಕಲಿಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ವೈಯಕ್ತಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಅವುಗಳನ್ನು ದೂರವಿಟ್ಟು ಕಲಿಯುವಂತಾಗಬೇಕು. ವೃತ್ತಿಬದ್ಧತೆಯಿಂದ ಮಾತ್ರ ಶಿಕ್ಷಕರು ಸಂತೃಪ್ತಿ ಗಳಿಸಬಹುದು ಎಂದರು.
ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ಓದು ಮತ್ತು ಬರೆಯುವಾಗ ಮಕ್ಕಳಲ್ಲಿ ಅಶಿಸ್ತು ಮತ್ತು ಅಶುದ್ಧತೆ ಇರುತ್ತದೆ. ಭಾಷಾ ಪ್ರಯೋಗ ಮಾಡುವಾಗ ಅಪಾರ್ಥ, ಅಭಾಸಗಳಿಗೆ ಎಡೆಮಾಡಿಕೊಡಬಾರದು. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಜಾಗರೂಕತೆಯಿಂದ ಕಲಿಸಬೇಕು. ತಳಹಂತದಿಂದಲೇ ಅಭ್ಯಾಸ ಮತ್ತು ಪೂರಕ ವಾತಾವರಣದಿಂದ ಕಲಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ತು ಕಾರ್ಯಾಗಾರ ಉದ್ಘಾಟಿಸಿದರು. ವಿಷಯ ಸಂಪನ್ಮೂಲ ವ್ಯಕ್ತಿಗಳಾದ ರವೀಶ್‌ಕುಮಾರ್, ಎಚ್.ವಿ. ಮಹದೇವಪ್ರಸಾದ್, ಮೋಲಿ ವರ್ಗೀಸ್, ಎಸ್.ಆಶಾ, ವಿಷಯ ಪರಿವೀಕ್ಷಕ ಎಸ್.ಸಿ. ಚನ್ನಬಸಪ್ಪ, ಸಹಾಯಕ ಶಿಕ್ಷಣಾಧಿಕಾರಿ ಎನ್. ರೇಣುಕಸ್ವಾಮಿ, ಸಹಶಿಕ್ಷಕ ಅಂದಯ್ಯ ಶಿರೂರ ಮಠ ಇತರರು ಇದ್ದರು.