ಎಲ್ಲರೊಟ್ಟಿಗೆ ಬದುಕಿದರೆ ಬೆಳವಣಿಗೆ

kdr swamiji
Published on

ಕಡೂರು: ಜಾತಿ ವ್ಯವಸ್ಥೆಯನ್ನು ಕೈಬಿಡಬೇಕು. ನಾವು ಎಲ್ಲರೊಟ್ಟಿಗೆ ಬದುಕುವುದನ್ನು ಕಲಿತಾಗ ಮಾತ್ರ ಮುಂದುವರಿಯುತ್ತೇವೆ ಎಂದು ಚಿತ್ರದುರ್ಗದ ಮಾದರ ಚನ್ನಯ್ಯ ಮಹಾಸಂಸ್ಥಾನದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಿಡಘಟ್ಟ ಗ್ರಾಮದಲ್ಲಿ ಸರ್ವಶರಣರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಬದಲಾದಂತೆ ನಾವೂ ಬದಲಾಗಬೇಕು. ಹಿಂದಿನ ವ್ಯವಸ್ಥೆಯಲ್ಲಿಯೇ ನಾವು ಮುಂದುವರಿಯಬಾರದು. ಮನೆ ಮಠ ಬದಲಾಗಿವೆ. ನಾವು ಪ್ರಬುದ್ಧತೆ ಬೆಳೆಸಿಕೊಂಡು ಬದಲಾಗಬೇಕು. ಇತ್ತೀಚೆಗೆ ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕವಾಗಿಯೂ ಮುಂದುವರಿಯುತ್ತಿದ್ದೇವೆ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರ ಜತೆಗೆ ಮಾದಿಗರ ಕೇರಿಯಲ್ಲಿ ಶರಣರ ನಡೆ ಆಗಬೇಕು. ಮಾದಿಗರು ಮಾದರಿಯಾಗಬೇಕು ಎಂದು ಹೇಳಿದರು.

ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಶಾಂತವೀರ ಸ್ವಾಮೀಜಿ ಮಾತನಾಡಿ, ಕೆಲವು ರಾಜಕಾರಣಿಗಳು ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅದಕ್ಕೆಲ್ಲ ಆಸ್ಪದ ಕೊಡದೆ ತಮ್ಮ ಕೆಲಸಗಳನ್ನು ಮಾಡುತ್ತ ಬೇರೆಯವರಿಗೆ ಮಾದರಿಯಾಗುವಂತೆ ಬದುಕಬೇಕು ಎಂದರು.

ಎಂಎಲ್ಸಿ ಸಿ.ಟಿ.ರವಿ ಮಾತನಾಡಿ, ಗ್ರಾಮದಲ್ಲಿ ಸಾಮರಸ್ಯದ ಬದುಕು ಹೆಚ್ಚು ಅರ್ಥಕೊಡಲಿದೆ. ಆಗ ಮಾತ್ರ ಶರಣರ ಆಶಯಗಳತ್ತ ಹೆಜ್ಜೆ ಹಾಕಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಗುರು ಹಿರಿಯರ ಮಾರ್ಗದರ್ಶನಗಳು ಗ್ರಾಮಗಳಲ್ಲಿ ಅತಿಅವಶ್ಯಕವಾಗಲಿದೆ ಎಂದರು.

ಭಗೀರಥ ಪೀಠದ ಡಾ. ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಚಿಂತಕ ಚಟ್ನಳ್ಳಿ ಮಹೇಶ್, ಗ್ರಾಪಂ ಅಧ್ಯಕ್ಷ ಶಂಕರಮೂರ್ತಿ, ರೇಣುಕಮೂರ್ತಿ, ಲಕ್ಷ್ಮಣನಾಯ್ಕ, ಶಿವಕುಮಾರ್ ಚಿತ್ರದುರ್ಗ, ಗಾಂಧಿಕುಮಾರ್, ಶ್ರೀರಾಂಪುರದ ಕುಮಾರ್, ನವೀನ್, ಸುಮಾ, ರಂಗಸ್ವಾಮಿ, ಅನಿತಾ ಪ್ರಹ್ಲಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net