

ಅಥಣಿ ಗ್ರಾಮೀಣ: ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ರೂಢಿಸಿಕೊಂಡು ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ದಾನಮ್ಮದೇವಿ ಪಾದಯಾತ್ರಾ ಕಮಿಟಿ ಈಚೆಗೆ ಹಮ್ಮಿಕೊಂಡಿದ್ದ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅನಾದಿ ಕಾಲದಿಂದಲೂ ದೇಶದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ಪ್ರತಿ ಹೆಣ್ಣು ತಾಯಿ, ತಂಗಿ, ಮಡದಿ ಹಾಗೂ ಮಗಳಾಗಿ ಕುಟುಂಬವನ್ನು ಬೆಳಗುತ್ತಾಳೆ. ಹೀಗಾಗಿ, ತಾಯಂದಿರ ತ್ಯಾಗ ಹಾಗೂ ಸೇವಾ ಮನೋಭಾವ ಅನುಕರಣೀಯ ಎಂದು ತಿಳಿಸಿದರು.
ಅಥಣಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಹೆಣ್ಣು ಸಮಾಜದ ಕಣ್ಣಾಗಿದ್ದಾಳೆ. ಹೀಗಾಗಿ, ನಮ್ಮ ಪೂರ್ವಜರ ಸಂಪ್ರದಾಯದಿಂದಲೇ ಇಂದು ಭಾರತ ವಿಶ್ವಗುರುವೆನಿಸಿಕೊಳ್ಳುತ್ತಿದೆ ಎಂದರು. ಬಳಿಕ ಗ್ರಾಮದ ನೂರಾರು ಸುಮಂಗಲೆಯರಿಗೆ ಉಡಿ ತುಂಬಲಾಯಿತು.
ಚಂದ್ರು ಯಲ್ಲಟ್ಟಿ, ಬಸಪ್ಪ ಗಣಿ, ತುಕ್ಕಪ್ಪ ಪೂಜಾರಿ, ಬೌರವ್ವ ಮಠಪತಿ, ವಿಜಯಾ ಪೂಜಾರಿ, ಕಸ್ತೂರಿ ಮಂಟೂರ, ಕಸ್ತೂರಿ ಪಾಟೀಲ, ಬಾಗವ್ವ ಮಠಪತಿ, ಸುವರ್ಣಾ ಮಗದುಮ್ಮ, ಪರಪ್ಪ ಪೂಜಾರಿ, ನರಸಪ್ಪ ಮಹಿಷವಾಡಗಿ, ವಿರೂಪಾಕ್ಷ ಶೇಡಬಾಳ, ಶಿವಾನಂದ ಸವದಿ, ಗುರುಶಾಂತ ಕರಡಿಮಠ, ಪಿ.ಎಲ್.ಪೂಜಾರಿ ಇತರರಿದ್ದರು.