ಎಲ್ಲರೂ ಸಂವಿಧಾನದ ಮೂಲ ಆಶಯ ತಿಳಿದುಕೊಳ್ಳಲಿ:  ಡಾ.ಶಿವಕುಮಾರ್

mysore
Published on

ಮೈಸೂರು: ಸಂವಿಧಾನ ಮೂಲ ವಿಚಾರಗಳನ್ನು ದೇಶದ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥ ಡಾ.ಶಿವಕುಮಾರ್ ಹೇಳಿದರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಿಂದ ನಟರಾಜ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಕಾನೂನಿನ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿರಬೇಕು. ರಾಜರ ಆಳ್ವಿಕೆಯಲ್ಲಿ ಹಿಂದು ಧರ್ಮಶಾಸ್ತ್ರ ಪ್ರಕಾರ ಆಡಳಿತ ನಡೆಯುತ್ತಿತ್ತು. ಸ್ವಾತಂತ್ರಾೃ ನಂತರ ಸಂವಿಧಾನದ ಪ್ರಕಾರ ಈಗ ಆಡಳಿತ ನಡೆಯುತ್ತಿದೆ. ಇದರಲ್ಲಿ ಸ್ವಾತಂತ್ರಾೃ, ಸಮಾನತೆ, ಭ್ರಾತೃತ್ವ, ಐಕ್ಯತೆ, ಸಮಗ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಸರ್ಕಾರ ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ದಿಷ್ಟ ಪಡಿಸುತ್ತದೆ. ಎಲ್ಲ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದರು.

ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಸಂವಿಧಾನ ರಚನಾ ಸಭೆಯಲ್ಲಿ 250ಕ್ಕೂ ಹೆಚ್ಚು ಸದಸ್ಯರು ಇದ್ದರಾದರೂ ಇದರ ಪ್ರಮುಖ ಶಿಲ್ಪಿ ಬಿ.ಆರ್.ಡಾ.ಅಂಬೇಡ್ಕರ್ ಅವರಾಗಿದ್ದಾರೆ. ಹೀಗಾಗಿ, ಅವರನ್ನು ಸಂವಿಧಾನ ಕರ್ತೃ ಎಂದು ಹೇಳಲಾಗುತ್ತದೆ. ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಾಂಶುಪಾಲೆ ಡಾ.ಎಂ.ಶಾರದಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಎ.ಪೂರ್ಣಿಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net