ಎಲ್ಲರೂ ವಚನ ಸಾಹಿತ್ಯದ ನೈತಿಕ ಮೌಲ್ಯ ಅಳವಡಿಸಿಕೊಳ್ಳಿ

13spt4
Published on

 ಸೋಮವಾರಪೇಟೆ: ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದ ನೈತಿಕ ಮೌಲ್ಯಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಸೋಮವಾರಪೇಟೆಯ ಅಕ್ಕಮಹಾದೇವಿ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಕದಳಿ ವೇದಿಕೆ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶರಣರು ಶುದ್ಧವಾದ ತಮ್ಮ ಅರಿವು, ಅನುಭವ ಮತ್ತು ಅನುಷ್ಠಾನಗಳ ಮೂಲಕ ಕರ್ಮ ಸಿದ್ಧಾಂತವನ್ನು ಕಾಯಕ ಸಿದ್ಧಾಂತವಾಗಿ, ದಾನ ಸಂಸ್ಕೃತಿಯನ್ನು ದಾಸೋಹ ಸಂಸ್ಕೃತಿಯಾಗಿ ಪರಿವರ್ತಿಸಿದರು. ಸ್ಥಾವರ ಸಂಸ್ಕೃತಿಗೆ ತಿಲಾಂಜಲಿ ಹಾಡಿ ದೇಹವನ್ನೇ ದೇವಾಲಯವಾಗಿ ಮಾಡಿದರು ಎಂದು ಹೇಳಿದರು.

ಶತಮಾನಗಳಿಂದ ನಿರ್ಲಕ್ಷೃಕ್ಕೆ ಒಳಗಾಗಿದ್ದ ಸ್ತ್ರಿಯರಿಗೆ ಸಮಾನತೆಯನ್ನು ತಂದು ಕೊಟ್ಟ ಹೆಗ್ಗಳಿಕೆ ಬಸವಾದಿ ಶರಣರಿಗೆ ಸಲ್ಲಬೇಕು. ಹಾಗಾಗಿ, ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವಚನಕಾರರ ಸಂದೇಶಗಳನ್ನು ಜನಮಾನಸಕ್ಕೆ ಹರಡಲು ಶರಣ ಸಾಹಿತ್ಯ ಪರಿಷತ್ತು ಕಟ್ಟಿದ್ದಾರೆ. ಹಾಗೆಯೇ, ಮಹಿಳೆಯರಲ್ಲೂ ಜಾಗೃತ ಮನೋಭಾವ ಉಂಟು ಮಾಡಲು ಈಗಿನ ಸುತ್ತೂರು ಶ್ರೀಗಳು ಕದಳಿ ವೇದಿಕೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.

ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಶಿಕ್ಷಕ ಮೆ.ನಾ.ವೆಂಕಟನಾಯಕ್, ಉಪನ್ಯಾಸ ನೀಡಿ, ಪ್ರತಿಯೊಬ್ಬರು ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ತಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ. ಸತ್ಯ ಶುದ್ಧ ಕಾಯಕ ಮಾಡಬೇಕು. ಯಾರಿಗೂ ಕೇಡು ಬಯಸದೇ ಕಾಯಕದಿಂದ ಬಂದ ಒಂದಿಷ್ಟನ್ನು ದಾಸೋಹಕ್ಕೆ ಬಳಸಬೇಕು ಎಂದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಕದಳಿ ವೇದಿಕೆಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ಪರಿಷತ್ತಿನ ಜಿಲ್ಲಾ ಕೋಶಾಧಿಕಾರಿ ಪರಮೇಶ್, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ವೀರಶೈವ ಸಮಾಜದ ಯಜಮಾನ ಶಿವಕುಮಾರ್, ಬಸವೇಶ್ವರ ಯುವಕ ಸಂಘದ ಗೌರವಾಧ್ಯಕ್ಷ ಮಂಜು ನೀಲಕಂಠ, ಸೋಮವಾರಪೇಟೆ ತಾಲೂಕು ಕದಳಿ ವೇದಿಕೆಯ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಉಪಾಧ್ಯಕ್ಷೆ ಉಮಾರುದ್ರಪ್ರಸಾದ್, ಕಾರ್ಯದರ್ಶಿ ಜಗದಂಬ ಗುರುಪ್ರಸಾದ್, ನಿರ್ದೇಶಕರಾದ ಜಲಜಾ ವಿಜಯಕುಮಾರ್, ಕವಿತಾ ಸಂಜಯ್, ದೇವಿಕಾ ಸಚಿನ್, ನಾಗಮಣಿ ಸರಿತಾ ಮಲ್ಲಿಕಾರ್ಜುನ, ದಿವ್ಯಾ ದಯಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net