

ಮೈಸೂರು: ಸರ್ವಜನ ಹಿತವನ್ನು ಬಯಸುವುದರೊಂದಿಗೆ ಎಲ್ಲರೂ ನಮ್ಮವರು ಎಂದು ಅಪ್ಪಿಕೊಳ್ಳುವುದೇ ಭಾರತೀಯ ಸಂಸ್ಕೃತಿ ಎಂದು ಚಿಂತಕ ಹಿರೇಮಗಳೂರು ಕಣ್ಣನ್ ಹೇಳಿದರು.
ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದಲ್ಲಿ ಮಾತನಾಡಿದರು.
ಪರಂಪರೆ ಮತ್ತು ಸಂಪ್ರದಾಯ ಅನುಸರಿಸಿಕೊಂಡು ಮುನ್ನಡೆಯಬೇಕು. ಸಂಸಾರದಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸಬೇಕು. ಸಂಸ್ಕೃತಿ ಮತ್ತು ಸಂಸಾರಕ್ಕೆ ಅವಿನಾಭಾವ ಸಂಬಂಧವಿದೆ. ಎರಡೂ ಪೂರಕವಾದವು. ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ತಂದೆ-ತಾಯಿ, ಗುರುಹಿರಿಯರನ್ನು ಶ್ರದ್ಧೆ, ಭಕ್ತಿ, ಗೌರವದಿಂದ ಕಾಣುವುದೇ ಸಂಸ್ಕೃತಿ ಎಂದು ಹೇಳಿದರು.
ಪಶುವೈದ್ಯ ಡಾ. ಬಸವರಾಜ ಬೆಣ್ಣಿ ಮಾತನಾಡಿ, ನಗು ಜೀವನಕ್ಕೆ ಅತಿ ಮುಖ್ಯವಾದದು. ಉತ್ತಮ ಆರೋಗ್ಯಕ್ಕೆ ನಗು ಅವಶ್ಯಕವಾಗಿ ಬೇಕು. ಸಕಾರಾತ್ಮಕ ಚಿಂತನೆಗಳಿಂದ ಮನಸ್ಸು ಯಾವಾಗಲೂ ಉಲ್ಲಾಸದಿಂದ ಕೂಡಿರುತ್ತದೆ.
ನಗು ಒಂದು ಔಷಧ, ಕಾರಣವಿಲ್ಲದೆ ನಕ್ಕರೆ ಔಷಧ ಬೇಕು. ಜೀವನದಲ್ಲಿ ಎಷ್ಟೇ ಕಷ್ಟ ದುಃಖವಿದ್ದರೂ ಮುಖದ ಮೇಲೆ ಯಾವಾಗಲೂ ನಗು ಇರಬೇಕು. ನಗು ಸಹಜವಾಗಿ ವ್ಯಕ್ತಿಯ ಮನಸ್ಸನ್ನು ಹಗುರಗೊಳಿಸುತ್ತದೆ ಎಂದು ಹೇಳಿದರು.
ಪ್ರಾಧ್ಯಾಪಕ ರಾಜಶೇಖರ್ ಮಠಪತಿ ಮಾತನಾಡಿ, ನಿಸರ್ಗದ ಮಧ್ಯದಲ್ಲಿ ಜಾನಪದ ಜನ್ಮತಾಳಿದ್ದು, ಜಾನಪದರು ಅವರ ಕಣ್ಣಮುಂದೆ ಇರುವ ಕಲ್ಲು, ಮಣ್ಣು, ಮಳೆ, ಬೆಂಕಿ, ಗಾಳಿ ಮತ್ತು ಮರಗಳಲ್ಲಿ ದೇವರನ್ನು ಕಂಡರು. ಅಲ್ಲಿ ಯಾವುದೇ ಮೋಸ-ವಂಚನೆ ಇರಲಿಲ್ಲ. ಜಾನಪದರಲ್ಲಿ ಮುಗ್ಧ ಭಕ್ತಿ ಮತ್ತು ನಂಬಿಕೆ ಮಾತ್ರ ಕಾಣಬಹುದು. ಜಾನಪದ ಸಾಹಿತ್ಯವು ಎಲ್ಲ ವಿಷಯ ಒಳಗೊಂಡಿದೆ. ಇದರಲ್ಲಿ ಯಾವುದೇ ಭೇದಭಾವಗಳು ಇಲ್ಲ, ಎಲ್ಲರನ್ನೂ ನಮ್ಮವರೇ ಎಂದು ಇದುವೇ ಸಾರುತ್ತದೆ ಎಂದು ಹೇಳಿದರು.
ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ಧ್ಯಾನ ಹಾಗೂ ದೇಸಿ ಆಟಗಳಲ್ಲಿ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಾರ್ಥನೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.