ಎಲ್ಲರೂ ಜಾನಪದ ಕಲೆ ಪೋಷಿಸಲಿ

12ATHANIGRAMIN2
Published on

ಅಥಣಿ ಗ್ರಾಮೀಣ: ಗ್ರಾಮೀಣ ಸೊಗಡಿನ ಜಾನಪದ ಕಲೆ ಎಂದಿಗೂ ನಶಿಸದಂತೆ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮೂಲ ಕಲೆ ಉಳಿಸಿ ಬೆಳೆಸಲು ಪ್ರಯತ್ನಿಸಬೇಕು ಎಂದು ಮುಖಂಡ ಮಲ್ಲಪ್ಪ ನೇಮಗೌಡ ಕರೆ ನೀಡಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಧಡಕೆ ತೋಟದ ವಸತಿ ಪ್ರದೇಶದ ಅಪ್ಪಯ್ಯ ಸ್ವಾಮೀಜಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಕಲಾ ಪ್ರದರ್ಶನಗಳು ಹಾಗೂ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಹಳ್ಳಿಯಲ್ಲಿ ಬಹುತೇಕ ಕಲಾವಿದರು ಹಿರಿಯರಾಗಿದ್ದು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅವರು ದೈನಂದಿನ ಬದುಕಿನ ಜತೆಗೆ ಕಲೆಗಾಗಿ ತೊಡಗಿಸಿಕೊಂಡು ಅಪೂರ್ವ ಸಾಧನೆ ಮಾಡಿದ್ದಾರೆ. ಅಂಥವರನ್ನು ಸರ್ಕಾರ ಗುರುತಿಸಿ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಸುಭಾಷ ಸೋನಕರ ಮಾತನಾಡಿ, ಯುವಜನರು ಕ್ರೀಡೆ, ಜಾನಪದ ಕಲೆಯನ್ನು ಉನ್ನತ ಸ್ಥಾನಕ್ಕೇರಿಸಲು ಹೋರಾಡಬೇಕು. ಚಂದ್ರಾಮ ಕಲ್ಲು, ಗುಂಡು ಹಾಗೂ ಹಗ್ಗದಂತಹ ಸ್ಪರ್ಧೆಗಳು ಆರೋಗ್ಯ ಹೆಚ್ಚಿಸಲಿವೆ ಎಂದರು.

ಅಪ್ಪಯ್ಯಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಬಿಲ್ವಾರ್ಚನೆಯೊಂದಿಗೆ ಸಹಸ್ರ ನಾಮವಳಿ ಪಠಿಸಲಾಯಿತು. ಬಳಿಕ ಕರಿಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವವು ಕುಂಭೋತ್ಸವದೊAದಿಗೆ ಸಂಭ್ರಮದಿಂದ ಜರುಗಿತು. ಮಧ್ಯಾಹ್ನ ಅನ್ನಪ್ರಸಾದ ವಿತರಿಸಲಾಯಿತು. ಮುಖಂಡರಾದ ಶಿವನಿಂಗ ಧಡಕೆ, ಸದಾಶಿವ ಅಡಹಳ್ಳಿ, ಸಿದ್ದಯ್ಯ ಮಠಪತಿ, ಬಸಪ್ಪ ಚಮಕೇರಿ, ಶೋಕೊತ ಪಾಚಾಪುರ, ಅಪ್ಪಯ್ಯ ಮಠಪತಿ, ವಕೀಲ ಶಿವಾನಂದ ಐಗಳಿ, ಯಶವಂತ ಪೋಳ, ಬಸವರಾಜ ಈರಳೆ, ಶ್ರೀಶೈಲ ಧಡಕೆ, ಶಿವಾನಂದ ಮಠಪತಿ, ಡಾ. ಮಲ್ಲಿಕಾರ್ಜುನ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net