ಎಲ್ಲರೂ ಒಗ್ಗಟ್ಟಾಗಿ ರಾಜ್ಯೋತ್ಸವ ಆಚರಿಸಲಿ

IMG_20231101_173635
Published on

ಬಾಗೂರು: ಜಾತಿ, ಮತ, ಧರ್ಮ, ಭೇದ, ಭಾವ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಬೇಕು ಎಂದು ಅರ್ಚಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ್ ಸ್ವಾಮೀಜಿ ತಿಳಿಸಿದರು.


ಹೋಬಳಿಯ ವಳಗೇರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.


ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಕಾಲದಿಂದಲೂ ರಾಜ್ಯೋತ್ಸವವನ್ನು ಆಚರಿಸುತ್ತಾ ಜಲ ನೆಲ ಭಾಷೆಯ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಕಳೆದ ವರ್ಷ ತೀವ್ರ ಮಳೆಯಿಂದ ರೈತರು ಬೆಳೆದ ತೆಂಗು, ರಾಗಿ ಇತರ ಬೆಳೆಗಳು ನೀರಿನಿಂದ ಹಾನಿಯಾದರೆ ಈ ವರ್ಷ ಮಳೆಯಾಗದೆ ತೆಂಗು, ಅಡಕೆ, ರಾಗಿ ಇತರ ಬೆಳೆಗಳಿಂದ ರೈತರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಸರ್ಕಾರ ಕೂಡಲೇ ಸಂಕಷ್ಟದಲ್ಲಿರುವ ನೇಗಿಲ ಯೋಗಿಯ ನೆರವಿಗೆ ಮುಂದಾಗಿ, ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ ರೈತರನ್ನು ಉಳಿಸಬೇಕು ಎಂದು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ 1500 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಹತ್ತನೇ ತರಗತಿ ವಿದ್ಯಾರ್ಥಿನಿ ವಿ.ಸಿ. ಮಮತಾ ಚಂದ್ರಶೇಖರ್ ಅವರನ್ನು ಶ್ರೀಧರ್ ಸ್ವಾಮೀಜಿ ಸನ್ಮಾನಿಸಿದರು. ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆಯುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನಗಳನ್ನು ಕೊಡುವುದಾಗಿ ತಿಳಿಸಿದರು.


ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್, ಮುಖ್ಯ ಶಿಕ್ಷಕ ರಾಜಗೋಪಾಲ್, ಶಿಕ್ಷಕರಾದ ನಾಗರಾಜ್, ಬಸವರಾಜ್, ಎಚ್.ಬಿ. ಹರೀಶ್, ಎಂ.ಕೆ. ಹರೀಶ್, ಜ್ಯೋತಿಶ್ರೀ, ಸುಮಿತ್ರ, ಶಿವಕುಮಾರ್ ಹಿರೇಮಠ, ಶಾಲಾ ಅಭಿವೃದ್ಧಿ ಸದಸ್ಯರು ವಿದ್ಯಾರ್ಥಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net