ಎಲ್ಲರೂ ಒಂದೇ ಎಂಬ ಸಂದೇಶ ಬಸವಣ್ಣನವರು ನೀಡಿದ್ದರು: ಮಣಕವಾಡದ ಶ್ರೀಗಳು

27c
Published on

ಗದಗ:

ಬಸವ ಪುರಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಇಸ್ಲಾಂ ಧರ್ಮದವರು ಭಾಗವಹಿಸಿದ್ದಾರೆ. ನಾವೆಲ್ಲರೂ ಒಂದೇ ಎಂಬ ಭಾವನೆ, ಬದ್ಧತೆಯನ್ನು ಅಪ್ಪಿಕೊಂಡಿದ್ದಾರೆ. ಒಪ್ಪಿಕೊಂಡಿದ್ದಾರೆ. ಬಸವಣ್ಣನವರ ಸ0ದೇಶವು ಇದೇ ಆಗಿತ್ತು ಎಂದು ಮಣಕವಾಡ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.
ನಗರದ ಹಾಲಕೆರೆ ಮಠದ ಆನಂದಾಶ್ರಮದಲ್ಲಿ ತಿಂಗಳು ಕಾಲ ಜರುಗುತ್ತಿರುವ ಬಸವ ಪುರಾಣ ಪ್ರವಚನ ನಿಮಿತ್ಯ ಪುರಾಣದಲ್ಲಿ ಪ್ರವಚನ ನೀಡುತ್ತ ಮಾತನಾಡಿ, ಇದು ಬಸವ ಪುರಾಣ ಸಾರ್ಥಕ ಕಂಡ ಘಳಿಗೆ. ಸಾವಿರಾರು ಸಂಖ್ಯೆಯ ಭಕ್ತಗಣಕ್ಕೆ ಮುಸ್ಲಿಂ ಸಮುದಾಯ ದಾಸೋಹ ಸೇವೆಗೈದು ದಾಸೋಹ ಪರಂಪರೆಯನ್ನು ಸ್ಮರಿಸಿದೆ. ನಾಡಿನಲ್ಲಿ ಬಸವಣ್ಣನವರು ಏನು ಮಾಡಿದರು ಎಂಬುದಕ್ಕೆ ಗದಗ ನಗರದ ಹಾಲಕೆರೆಮಠದಲ್ಲಿ ನಡೆದ ಅಪರೂಪದ ಕಾರ್ಯಕ್ರಮ ಸಾಕ್ಷಿಯಾಗಿದೆ. ಎಲ್ಲ ಸಮಾಜದ ಜನರನ್ನು ಒಂದು ಕಡೆಗೆ ಕೂಡಿಸಿಕೊಂಡು ಬಸವಣ್ಣನವರು ಅನುಭವ ಮಂಟಪ ಮಾಡಿದರು. ಅಂತಹ ಅನುಭವ ಮಂಟಪದ ತದ್ರೂಪ ಎನಿಸಿರುವ ಹಾಲಕೆರೆಮಠದ ಕಾರ್ಯ ಶ್ಲಾಘನೀಯ. ಇಂದು ಅಲ್ಲಮನ ಪ್ರಸಂಗವಿದೆ, ಅಲ್ಲಾನ ದಾಸೋಹವಿದೆ. ಇದಕ್ಕಿಂತ ಸಾಮರಸ್ಯ ಮತ್ತೊಂದಿಲ್ಲ. ಸಮಾಜಕ್ಕೆ ಇದಕ್ಕಿಂತ ದೊಡ್ಡ ಸಂದೇಶ ಬೇಕಿಲ್ಲ ಎಂಬ ಅಭಿಪ್ರಾಯ ನನ್ನದಾಗಿದೆ ಎಂದು ಮಣಕವಾಡದ ಶ್ರೀಗಳು ಹೇಳಿದರು.
ಡಾ. ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ಎಲ್ಲ ಧರ್ಮಗಳ ಸಾರ ಒಂದೇ, ಗುರು ಎಲ್ಲರಿಗೂ ಒಬ್ಬನೆ. ಯಾವ ಧರ್ಮವೂ ಕೆಟ್ಟದ್ದನ್ನು ಬೋ„ಸಿಲ್ಲ, ಎಲ್ಲ ಧರ್ಮಗಳು ಶಾಂತಿಯನ್ನು ಪ್ರತಿಪಾದಿಸಿವೆ. ಇದಕ್ಕೆ ಇಸ್ಲಾಂ ಕೂಡ ಹೊರತಲ್ಲ. ಇಸ್ಲಾಂ ಧರ್ಮದವರು ಬಸವ ಪುರಾಣ ದಾಸೋಹ ಸೇವೆಗೈದಿರುವುದು ಅತ್ಯಂತ ಶ್ಲಾಘನೀಯ. ಸಾಮರಸ್ಯ ಸಾರುವ ಈ ಕ್ಷಣ ಎಲ್ಲರಿಗೂ ಮಾದರಿ ಎಂದರು. ಮಲ್ಲಸಮದ್ರ ಓಂಕಾರೇಶ್ವರ ಮಠದ ಫಕ್ಕೀರೇಶ್ವರ ಶ್ರೀಗಳು, ಕುರಗೋಡದ ನಿರಂಜನ ಪ್ರಭು ದೇವರು, ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡಿ ವಿರಕ್ತಮಠದ ಮರಿಕೊಟ್ಟೂರು ದೇವರು, ಬೂದಗುಂಪದ ಸಿದ್ಧೇಶ್ವರ ದೇವರು, ವ್ಯಾಕರನಾಳು ವಿಶ್ವೇಶ್ವರ ದೇವರು, ವಾಗೀಶ ದೇವರು, ಪ್ರವಚನಕಾರ ಅಬ್ದುಲ್ ಖಾದಿರ್ ಅಣ್ಣಿಗೇರಿ ವೇದಿಕೆ ಮೇಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net