

ಹಾಸನ: ಪರಿಸರ ಪ್ರೇಮಿ ಹಾಗೂ ಸಮಾಜ ಸೇವಕ ಹನುಮೇಗೌಡ ಹಾಗೂ ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನ, ಶ್ರೀ ಲಕ್ಷ್ಮೀ ರಂಗನಾಥ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಕೌಶಿಕ ಗ್ರಾಪಂ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಆರೋಗ್ಯದ ಮುಂದೆ ಬೇರೇನೂ ಮುಖ್ಯವಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳುವತ್ತ ಚಿತ್ತ ಹರಿಸಬೇಕಿದೆ. ಆರೋಗ್ಯ ತಪಾಸಣಾ ಶಿಬಿರಗಳು ಗ್ರಾಮೀಣ ಭಾಗದ ಜನರಿಗೆ ಹೆಚ್ಚೆಚ್ಚು ಉಪಯುಕ್ತವಾಗುತ್ತವೆ. ದೂರದ ಊರುಗಳಿಂದ ನಗರ ಭಾಗಕ್ಕೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ನಡೆಯಬೇಕಿದೆ ಎಂದರು.
ಪರಿಸರ ಪ್ರೇಮಿ ಹನುಮೇಗೌಡ ಮಾತನಾಡಿ, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಕಾಂಕ್ಷೆ ಹೊಂದಿದ್ದೇನೆ. ದೂರದ ಆಂಧ್ರಪ್ರದೇಶದಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ನಾನು ಹುಟ್ಟೂರಿಗೆ ನನ್ನ ಕೈಲಾದ ಸೇವೆ ಮಾಡಬೇಕೆಂಬ ಸದುದ್ದೇಶ ಹೊಂದಿ ಸುಮಾರು 500 ಗಿಡಗಳನ್ನು ನೆಟ್ಟು ಸುರಕ್ಷಿತವಾಗಿ ಬೆಳೆಸಲು ಕಬ್ಬಿಣದ ಗಾರ್ಡ್ ವ್ಯವಸ್ಥೆ, ಬೇಸಿಗೆಯಲ್ಲಿ ನೀರುಣಿಸಲು ಟ್ಯಾಂಕರ್ ವ್ಯವಸ್ಥೆ ಮಾಡಿದ್ದೇನೆ. ಜತೆಗೆ ಆರೋಗ್ಯ ತಪಾಸಣಾ ಶಿಬಿರ ನನಗೆ ಧನ್ಯಾತಾಭಾವ ಮೂಡಿಸಿದೆ ಎಂದರು.
25ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆದಿಚುಂಚನಗಿರಿ ಆಸ್ಪತ್ರೆ, ಜೀವಜ್ಯೋತಿ ಆಸ್ಪತ್ರೆ, ಅಮ್ಮ ಕಣ್ಣಿನ ಆಸ್ಪತ್ರೆ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯರ ಸಂಘದಿಂದ ತಪಾಸಣಾ ಶಿಬಿರ ನಡೆಸಲಾಯಿತು. 600ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಸೆಂಟ್ರಲ್ ಅಧ್ಯಕ್ಷ ರೊ.ಎಂ.ಡಿ. ನಾಗೇಶ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಸನ ತಾಲೂಕು ಯೋಜನಾಧಿಕಾರಿ ಧನಂಜಯ್, ಶ್ರೀ ಲಕ್ಷ್ಮೀ ರಂಗನಾಥ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ನಾಗೇಂದ್ರ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಲಕ್ಷ್ಮೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.