ಎಲ್ಲರಲ್ಲಿ ಶುಚಿತ್ವದ ಅರಿವು ಮೂಡಿಸಿ

1 HBD 1
ಹುಮನಾಬಾದ್ ತಾಲೂಕಿನ ಗಡವಂತಿಯಲ್ಲಿ ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನದ ನಿಮಿತ್ತ ಶನಿವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶೌಚಗೃಹ ನಿರ್ಮಿಸಲು ೨೬ ಕುಟುಂಬಗಳಿಗೆ ಆದೇಶ ಪತ್ರವನ್ನು ಜಿಪಂ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಪಂಚಶೀಲಾ ಸಿದ್ದಪ್ಪ, ಉಪಾಧ್ಯಕ್ಷ ಮಾಣಿಕ ನಿಮಾನೆ, ತಾಪಂ ಇಒ ದಿಪೀಕಾ ನಾಯ್ಕರ್, ಪಿಡಿಒ ರಾಜಶೇಖರ ಬುಳ್ಳಾ ಇತರರಿದ್ದರು.
Published on

ಹುಮನಾಬಾದ್: ಸ್ವಚ್ಛತೆ ಹಾಗೂ ಆರೋಗ್ಯ ರಕ್ಷಣೆಗಾಗಿ ಪ್ರತಿಯೊಬ್ಬರೂ ಶೌಚಗೃಹ ಬಳಸಬೇಕೆಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ ಹೇಳಿದರು.

ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನದ ನಿಮಿತ್ತ ಗಡವಂತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿವರ್ಷ ನ.೧೯ರಂದು ವಿಶ್ವ ಶೌಚಾಲಯ ದಿನ ಆಚರಿಸಲಾಗುತ್ತಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸುತ್ತಮುತ್ತಲಿನ ಪರಿಸರ ಹಾಳಾಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಜನರಲ್ಲಿ ಶುಚಿತ್ವ ಬಗ್ಗೆ ಅರಿವು ಮೂಡಿಸಿ ಜನಸಾಮಾನ್ಯರಿಗೆ ಪ್ರೇರೇಪಿಸಲು ಈ ಆಂದೋಲನ ಸಹಕಾರಿಯಾಗಲಿದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಮಾತನಾಡಿ, ಬಯಲು ಶೌಚದಿಂದ ಆರೋಗ್ಯಕ್ಕೆ ಅಪಾಯಗಳು ಹೆಚ್ಚಾಗುವುದರ ಜತೆಗೆ ಮಹಿಳೆ ಮತ್ತು ಮಕ್ಕಳಿಗೆ ತೊಂದರೆ ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಶೌಚಗೃಹ ನಿರ್ಮಾಣಕ್ಕೆ ಸಹಾಯ ಧನ ಒದಗಿಸುತ್ತಿದೆ. ಪ್ರತಿಯೊಬ್ಬರೂ ಶೌಚಗೃಹ ನಿರ್ಮಿಸಿ, ಬಳಸುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು.

ಗ್ರಾಮದ ಮಕ್ಕಳಿಂದ ಕಾಲುನಡಿಗೆ ಜಾಥಾ ಆಯೋಜಿಸಲಾಯಿತು. ಗ್ರಾಪಂದಿಂದ ಪ್ರಾರಂಭವಾದ ಜಾಥಾ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಶಾಲೆಯ ಆವರಣ ತಲುಪಿತು. ನಂತರ ಮಕ್ಕಳಿಂದ ಕಿರು ನಾಟಕ ಪ್ರದರ್ಶಿಸಲಾಯಿತು. ಅಲ್ಲದೆ ರಂಗೋಲಿ ಮತ್ತು ಚಿತ್ರಕಲೆ ಸ್ಪಧೆ, ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು,

ಗ್ರಾಪಂನಿಂದ ಶೌಚಗೃಹ ನಿರ್ಮಿಸಲು ೨೬ ಕುಟುಂಬಗಳಿಗೆ ಆದೇಶ ಪತ್ರ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಪಂಚಶೀಲಾ ಸಿದ್ದಪ್ಪ, ಉಪಾಧ್ಯಕ್ಷ ಮಾಣಿಕ ನಿಮಾನೆ, ತಾಪಂ ಸಹಾಯಕ ನಿರ್ದೇಶಕ ಜಗನ್ನಾಥ ಮತ್ತು ಶಿವಲೀಲಾ, ಪಿಡಿಒ ರಾಜಶೇಖರ ಬುಳ್ಳಾ, ಗ್ರಾಪಂ ಸದಸ್ಯರುಗಳಾದ ವಿನೋದ ಕುಮಾರ, ದಿಲೀಪಕುಮಾರ, ನಿಜಾಮುದ್ದೀನ್, ಶೇಖ್ ಮೃತುಜಾ, ರವೀಂದ್ರ, ನಾಗೇಶ, ನಂದಾದೇವಿ, ಭಾಗ್ಯರತಿ, ಪ್ರೇಮಾ, ಸುಶೀಲಾಬಾಯಿ ಇತರರಿದ್ದರು.

ಸಹ ಶಿಕ್ಷಕಿ ಸುಜಾತ ನಿರೂಪಣೆ ಮಾಡಿದರು. ನೀತಿ ಆಯೋಗದ ಸಂಯೋಜಕ ನಾಗೇಂದ್ರ ಮಡ್ರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net