

ಆನವಟ್ಟಿ: ಎಲ್ಲ ಜಾತಿ, ಧರ್ಮದವರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣುವ ನಾಯಕ ಮಧು ಬಂಗಾರಪ್ಪ ಅವರನ್ನು ಈ ಬಾರಿ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸುವುದು ನಮ್ಮ ಗುರಿ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಧು ಬಂಗಾರಪ್ಪ ಚುನಾವಣೆಯಲ್ಲಿ ಸೋತಾಗಲೂ ಕಾರ್ಯಕರ್ತರ ಮೇಲಿನ ನಂಬಿಕೆ, ವಿಶ್ವಾಸ ಕಡಿಮೆ ಮಾಡಲಿಲ್ಲ. ಅಧಿಕಾರ ಇಲ್ಲದಿದ್ದರು ಕೂಡ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ತಾಲೂಕಿನ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ಮಧು ಬಂಗಾರಪ್ಪ ಅವರನ್ನು ಬೆಂಬಲಿಸಬೇಕು ಎಂದರು.
ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ಗೆಲುವು ಪಡೆದ ಕುಮಾರ್ ಬಂಗಾರಪ್ಪ ಅವರು ಯಡಿಯೂರಪ್ಪ ಅವರಿಗೆ ಮೋಸ ಮಾಡಿದರು. ನೊಂದ ಬಿಜೆಪಿ ಕಾರ್ಯಕರ್ತರು ಬೀದಿಗೆ ಬಂದು ನಮೋ ವೇದಿಕೆ ಕಟ್ಟಿಕೊಂಡಿದ್ದಾರೆ. ಗೆಲುವಿಗೆ ಶ್ರಮಿಸಿರುವ ಕಾರ್ಯಕರ್ತರನ್ನೇ ಹೊರಹಾಕಿದ ಶಾಸಕರಿಂದ ಕ್ಷೇತ್ರದ ಸಾಮಾನ್ಯ ಜನರ ಕಷ್ಟಕ್ಕೆ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ಕುಟುಕಿದರು.