ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯೋಣ: ಶಾಸಕರಿಗೆ ಎಚ್.ಡಿ. ರೇವಣ್ಣ ಸಲಹೆ

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯೋಣ: ಶಾಸಕರಿಗೆ ಎಚ್.ಡಿ. ರೇವಣ್ಣ ಸಲಹೆ
Published on

ಹಾಸನ: ಯಾರಿಗೂ ತೊಂದರೆ ನೀಡದೆ, ನಮ್ಮ ಕೈಲಾದ ಒಳ್ಳೆಯ ಕೆಲಸ ಮಾಡೋಣ. ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ನೂತನ ಶಾಸಕ ಎಚ್.ಪಿ.ಸ್ವರೂಪ್‌ಗೆ ಸಲಹೆ ನೀಡಿದರು.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು, ಕ್ರಿಶ್ಚಿಯನ್ ಸಮಾಜದವರು ಸೇರಿ ಎಲ್ಲ ಸಮಾಜದ ಮತದಾರರು ಹಾಸನ ಕ್ಷೇತ್ರದಲ್ಲಿ ಸ್ವರೂಪ್ ಕೈ ಹಿಡಿದಿದ್ದಾರೆ. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೆ ಸಾಲದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಕೆಲವರು ‘ರೇವಣ್ಣ ನನ್ನ ವಿರುದ್ಧ ಸ್ಪರ್ಧಿಸಲಿ, ಗೆಲುವಿನ ಅಂತರ ಐವತ್ತು ಸಾವಿರಕ್ಕಿಂತ ಒಂದು ಮತ ಕಡಿಮೆ ಬಂದರೆ ರಾಜೀನಾಮೆ ನೀಡಿ ಚುನಾವಣೆಗೆ ಹೋಗುತ್ತೇನೆ,’ ಎಂದು ಹೇಳಿದ್ದರು. ಆದರೆ ಕ್ಷೇತ್ರದ ಜನರು ಮತ್ತೊಮ್ಮೆ ಚುನಾವಣೆ ನಡೆಯುವುದು ಬೇಡವೆಂದು ಜೆಡಿಎಸ್ ಗೆಲ್ಲಿಸಿದ್ದಾರೆ ಎಂದು ಪರೋಕ್ಷವಾಗಿ ಪ್ರೀತಂ ಜೆ.ಗೌಡ ಅವರನ್ನು ಟೀಕಿಸಿದರು.

ಹಾಸನ ಕ್ಷೇತ್ರದ ಜನತೆ ಎಚ್.ಪಿ.ಸ್ವರೂಪ್ ಅವರನ್ನು ಆಯ್ಕೆ ಮಾಡುವ ಮೂಲಕ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ವರೂಪ್ ಅವರ ತಂದೆ ನಾಲ್ಕು ಬಾರಿ ಶಾಸಕರಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದರಿಂದ ಈ ಬಾರಿ ಎಂಟು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಾಸನ ನಗರವನ್ನು ರಾಜ್ಯದಲ್ಲಿ ನಂ.1 ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಯಾರು ಹೆದರಬೇಕಿಲ್ಲ. ಕಾಂಗ್ರೆಸ್-ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ತೆಗಿಯಬೇಕು ಎಂದು ಹಗಲು ರಾತ್ರಿ ಓಡಾಡುತ್ತಿವೆ. ಆದರೆ ಅದು ಯಾರಿಂದಲ್ಲೂ ಸಾಧ್ಯವಿಲ್ಲ. ಜೆಡಿಎಸ್ ಕಾರ್ಯಕರ್ತರಿಗೆ ಎಲ್ಲೂ ನೋವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೇ ಕಚೇರಿಯಲ್ಲಿ ಕೆಲಸ ಆಗಲಿಲ್ಲ ಎಂದರೆ ಅಲ್ಲೇ ಹೋಗಿ ಕುಳಿತುಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಹೋರಾಡೋಣ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಪರ ನಿಲ್ಲುವ ಕೆಲಸವನ್ನು ನಾವೆಲ್ಲ ಮಾಡಲಿದ್ದೇವೆ ಎಂದರು.

ಸಕಲೇಶಪುರ ಕ್ಷೇತ್ರದಲ್ಲಿ ಎಚ್.ಕೆ.ಕುಮಾರಸ್ವಾಮಿ ಅವರನ್ನು ನಮ್ಮ ಕೈಯಾರೆ ಸೋಲಿಸಿದಂತಾಗಿದ್ದು, ಅವರು ಸೋತಿದ್ದು ದುರದೃಷ್ಟಕರ. ಅಲ್ಪ ಮತಗಳ ಅಂತರದಿಂದ ಸೋತಿರುವುದು ನೋವು ತರಿಸಿದೆ. ನಮ್ಮ ಶಾಸಕರ ಅವಧಿಯಲ್ಲಿ ಜಾರಿಗೊಂಡ ಅಭಿವೃದ್ಧಿ ಕೆಲಸಗಳಿಗೆ ತಡೆಯೊಡ್ಡದಂತೆ ನೋಡಿಕೊಳ್ಳಬೇಕಿದೆ. ಏನೇ ಕೆಲಸವಾಗಬೇಕಿದ್ದರೂ ನಾವೆಲ್ಲ ಜತೆಯಾಗಿ ಹೋರಾಟ ನಡೆಸಿ ಪಡೆದುಕೊಳ್ಳೋಣ ಎಂದು ಹೇಳಿದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದ್ಯಾವೇಗೌಡ, ಕಾರ್ಲೆ ಇಂದ್ರೇಶ್, ಕಮಲ್ ಕುಮಾರ್, ಗಿರೀಶ್ ಚನ್ನವೀರಪ್ಪ, ಇರ್ಷಾದ್ ಪಾಷ, ಜಯರಾಮ್, ರಘು ಹೊಂಗೆರೆ ಮತ್ತಿತರು ಹಾಜರಿದ್ದರು.

ಗೆಲುವಿಗೆ ಶ್ರಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಸ್ವರೂಪ್

ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ನನ್ನನ್ನು ಗೆಲ್ಲಿಸಿದ್ದಾರೆ. 84 ಸಾವಿರ ಮತಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ನನ್ನ ಗೆಲುವಿಗೆ ಸಹಕಾರ ನೀಡಿದ ರೇವಣ್ಣ ಸಾಹೇಬರು, ಭವಾನಿ ಮೇಡಂ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಕ್ಷೇತ್ರದ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸದ್ಯದಲ್ಲೇ ಎದುರಾಗಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ಲೋಕಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟನೆಗೆ ನಾವೆಲ್ಲ ಮುಂದಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕಿದೆ ಎಂದರು.

ಅತಿಯಾದ ಆತ್ಮವಿಶ್ವಾಸದಿಂದ ಸೋಲು: ಕುಮಾರಸ್ವಾಮಿ

ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯ ಏಳು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಮೂರು ಕ್ಷೇತ್ರಗಳಲ್ಲಿ ಸೋಲು ಅನುಭವಿಸಬೇಕಾಯಿತು. ಈ ಬಾರಿ ಚುನಾವಣೆಯಲ್ಲಿ ಜನರು ಅಭಿವೃದ್ಧಿ ಕಾರ್ಯಗಳಿಗಿಂತ ಭಾವನಾತ್ಮಕ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ ಜೆಡಿಎಸ್‌ಗೆ ಹಿನ್ನಡೆಯಾಗಿದೆ. ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ಜೆಡಿಎಸ್ ಮೇಲೆ ಪರಿಣಾಮ ಬೀರಿದ್ದರಿಂದ ಕಾಂಗ್ರೆಸ್‌ಗೆ ಅನುಕೂಲವಾಗಿದೆ ಎಂದು ವಿಶ್ಲೇಷಿಸಿದರು.

ಚುನಾವಣೆ ಪೂರ್ವ ಕಾಂಗ್ರೆಸ್ ಜನರಿಗೆ ನೀಡಿದ್ದು ಗ್ಯಾರಂಟಿಗಳಲ್ಲ, ಆಮಿಷ. ಆ ಬಗ್ಗೆ ನಾವು ಜನರಿಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದೇವೆ. ಅತಿಯಾದ ಆತ್ಮ ವಿಶ್ವಾಸದಿಂದ ಸಕಲೇಶಪುರ ಕ್ಷೇತ್ರದಲ್ಲಿ ನನಗೆ ಸೋಲಾಗಿದೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್.ಡಿ.ರೇವಣ್ಣ ಅವರ ಗೆಲುವಿನ ಅಂತರ ಕಡಿಮೆಯಾಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಈ ಬಗ್ಗೆ ಪಕ್ಷದೊಳಗೆ ಆಂತರಿಗೆ ಸಭೆ ನಡೆಸಿ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಚುನಾವಣೆಯಲ್ಲಿ ನಾವು ಸೋತರು ನಮ್ಮ ಪಕ್ಷಕ್ಕೆ ನಾವೇ ಶಾಸಕರಿದ್ದಂತೆ. ಆದ್ದರಿಂದ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಬೇಕಿದೆ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ನಾವೆಲ್ಲ ಜೊತೆಗಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net