

ಮೈಸೂರು: ಕುಟುಂಬದಲ್ಲಿ ಮಾನಸಿಕ ಅಸ್ವಸ್ಥ, ಕುಂಟ, ಕುರುಡರನ್ನು ಸ್ವೀಕರಿಸುವ ರೀತಿಯಲ್ಲೇ ಲೈಂಗಿಕ ಅಲ್ಪಸಂಖ್ಯಾತರನ್ನೂ ಸ್ವೀಕರಿಸಿದರೆ ಯಾರೂ ಬೀದಿಗೆ ಬರುವುದಿಲ್ಲ. ಕುಟುಂಬ, ಸಮಾಜ ಈ ಬಗ್ಗೆ ಆಲೋಚಿಸಬೇಕು ಎಂದು ನಟಿ, ರಂಗ ನಿರ್ದೇಶಕಿ, ಸಂಚಾರಿ ಥಿಯೇಟರ್‌ನ ಎನ್.ಮಂಗಳಾ ಹೇಳಿದರು.
ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಲೈಂಗಿಕ ಅಲ್ಪಸಂಖ್ಯಾತರ ಅಸ್ಮಿತೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಂಗದ ಮೇಲೆ ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಕುಟುಂಬದಲ್ಲಿ ಒಪ್ಪಿಕೊಳ್ಳುತ್ತಿಲ್ಲ. ಈ ಸಮುದಾಯದಲ್ಲಿ ಅನೇಕ ವರ್ಗದವರು ಇದ್ದಾರೆ. ಅವರೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕಿದೆ.
ಒಬ್ಬೊಬ್ಬರಿಗೆ ಒಂದೊಂದರಲ್ಲಿ ತಮ್ಮ ಭಾವನೆ ಹಂಚಿಕೊಳ್ಳುವ ಅವಕಾಶ ಸಿಗುತ್ತಿದೆ. ಈ ಸಮುದಾಯದವರಿಗೆ ತಮ್ಮ ಅಸ್ಮಿತೆ ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಇದನ್ನೇ ತಲ್ಕಿ ನಾಟಕದಲ್ಲಿ ಅಭಿವ್ಯಕ್ತಗೊಳಿಸಲಾಗಿದೆ. ಇವರಿಗೆ ಇರುವ ಧೈರ್ಯ ನಮಗ್ಯಾರಿಗೂ ಇಲ್ಲ ಎಂದರು.
ಸಮಾಜದಲ್ಲಿ ಭಿನ್ನವಾದ ವಿವಿಧ ಛಾಯೆಗಳಿರುವುದಾದರೆ ರಂಗಭೂಮಿಯ ವೇದಿಕೆ ಮೇಲೂ ಏಕೆ ಆಗಬಾರದು ಎನ್ನುವುದು ಸಹಜ ಪ್ರಶ್ನೆ. ರಂಗಭೂಮಿ ಪುರುಷ, ಸ್ತ್ರೀ ಹಾಗೂ ಮಕ್ಕಳಿಗೆ ಮಾತ್ರ ಸೀಮಿತವಲ್ಲ. ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಬೇಕು ಎಂದರು.
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ ಮಲ್ಲು ಕುಂಬಾರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ನಮ್ಮನ್ನು ತಿರಸ್ಕರಿಸಿವೆ. ರಕ್ಷಣೆಯನ್ನೂ ನೀಡುತ್ತಿಲ್ಲ. ಅವರ ಆರ್ಥಿಕ ಸ್ಥಿತಿ, ಶೈಕ್ಷಣಿಕ ಸ್ಥಿತಿಗತಿ ಹಾಗೂ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
‘ಅಲ್ಪಸಂಖ್ಯಾತರ ರಕ್ಷಣೆ ಕಾಯ್ದೆ, ಅಲ್ಪಸಂಖ್ಯಾತರ ಕಾಯ್ದೆ’ ಎಂಬುದಾಗಿ ಕಾನೂನು ಮಾಡಿದ್ದಾರೆ. ಆದರೆ ಇದು ಜಾರಿಯಾಗಿಲ್ಲ. ನಮ್ಮನ್ನು ಸಮಾಜ ಯಾವರೀತಿ ಕಾಣಬೇಕು, ನಾವು ಹೇಗೆ ಸಮಾಜಕ್ಕೆ ಹೊಂದಿಕೊಳ್ಳಬೇಕು ಮುಂತಾದ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೌಟುಂಬಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ನಮಗೆ ಸರಿಯಾದ ಸ್ಥಾನಮಾನ ದೊರೆಯುತ್ತಿಲ್ಲ. ನಮ್ಮನ್ನು ನಾವು ಯಾರು ಎಂದು ಹೇಳಿಕೊಳ್ಳಲು ಆಗುತ್ತಿಲ್ಲ.
ಗಂಡು ಹೆಣ್ಣಾಗ ಬಯಸಿದರೆ ಅಥವಾ ಹೆಣ್ಣು ಗಂಡಾಗಲು ಬಯಸಿದರೆ ಕುಟುಂಬದವರು, ಸಮಾಜ ಹಾಗೂ ಸಮುದಾಯ ವಿರೋಧಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಚೆನ್ನೈ ಕ್ವೀರ್ ಮತ್ತು ರಂಗ ಚಳವಳಿಗಾರ ಶ್ರೀಜೀತ್ ಸುಂದರಂ, ಮಾನವ ಹಕ್ಕುಗಳ ಹೋರಾಟಗಾರ್ತಿ ಚಾಂದನಿ ಇದ್ದರು.