ಎಲ್ಲರ ಸಹಕಾರ ಸಿಕ್ಕರೆ ನವ ನೆಲಮಂಗಲ ನಿರ್ಮಾಣ

1
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಸರ್ಕಾರದ ಜತೆಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಿದಲ್ಲಿ ನವ ನೆಲಮಂಗಲ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನಗರಸಭೆ ವ್ಯಾಪ್ತಿಯ ವಿವಿಧೆಡೆ ನಗರಸಭೆಯ 15ನೇ ಹಣಕಾಸು ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ಜನರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನಿತ್ಯ ಶ್ರಮಿಸಲಾಗುತ್ತಿದೆ. ನಗರದ ಪೇಟೆಬೀದಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ನಗರದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಎಬಿನೇಜರ್ ಶಾಲೆಯ ರಸ್ತೆ ಸುಮಾರು ದಶಕಗಳಿಂದ ಹಾಳಾಗಿದ್ದು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದು, ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಮಾತನಾಡಿ, ರಸ್ತೆ ಅಭಿವೃದ್ಧಿ ಪೇಟೆಬೀದಿಯ ಜನರ ಬಹುದಿನ ಕನಸಾಗಿದ್ದು, ಈ ಹಿನ್ನೆಲೆಯಲ್ಲಿ 37ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ 47ಲಕ್ಷ ರೂ.ವೆಚ್ಚದಲ್ಲಿ ಎಬಿನೇಜರ್ ಶಾಲೆಯ ಸಮೀಪ ರಸ್ತೆಯನ್ನು ಆಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ನಗರಸಭೆ ಉಪಾಧ್ಯಕ್ಷೆ ಸುಜಾತಾ ಮುನಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್‌ಮೂಡ್, ಸದಸ್ಯ ಗಂಗಾಧರ್ ರಾವ್, ಎನ್.ಗಣೇಶ್, ಆಂಜಿನಪ್ಪ, ಪುರುಷೋತ್ತಮ್, ಆನಂದ್, ಹೆಚ್ಚುವರಿ ಸದಸ್ಯ ಕೃಪಾನಂದ್, ಅಂಜನಾಮೂರ್ತಿ, ರಾಮಮೂರ್ತಿ, ಪೌರಾಯುಕ್ತ ಮನುಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎ.ಪಿಳ್ಳಪ್ಪ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ ,

ಸದಸ್ಯ ಬಿ.ಜಿ.ವಾಸು, ಬಿಎಂಟಿಸಿ ಮಾಜಿ ನಿರ್ದೇಶಕ ಮೂರ್ತಿ, ಚಿನ್ನ-ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಎನ್.ಎಸ್.ಮೂರ್ತಿ, ಲಕ್ಷ್ಮೀಕಾಂತ್, ಮನುಕುಮಾರ್, ನಾಗರಾಜು, ಪ್ರಸನ್ನಕುಮಾರ್ ಇದ್ದರು.

ದೇವಾಲಯ ಭೇಟಿ, ಪೇಟೆ ಬೀದಿಯಲ್ಲಿ ಕಾಲ್ನಡಿಗೆ: ಭೂಮಿಪೂಜೆಗೂ ಮುನ್ನ ಶಾಸಕ ಎನ್.ಶ್ರೀನಿವಾಸ್ ಸೇರಿ ಗಣ್ಯರು ಇತಿಹಾಸ ಪ್ರಸಿದ್ಧ ಶ್ರೀಕಾಶಿ ವಿಶ್ವೇಶ್ವರ ದೇವಾಲಯಕ್ಕೆ ಭೇಟಿ ದೇವರ ದರ್ಶನ ಪಡೆದುಕೊಂಡರು. ಭೂಮಿಪೂಜೆ ನೆರವೇರಿಸಿದ ಬಳಿಕ ಶಾಸಕ ಎನ್.ಶ್ರೀನಿವಾಸ್ ನಗರದ ಶ್ರೀಕಾಶಿ ವಿಶ್ವೇಶ್ವರ ದೇವಾಲಯದಿಂದ ನಗರದ ಮಾರ್ಕೇಟ್‌ಚೌಕದವರೆಗೂ ಪೇಟೆ ಬೀದಿಯಲ್ಲಿ ವರ್ತಕರು, ಬೀದಿ ಬದಿ ವ್ಯಾಪಾರಿಗಳು ಸೇರಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಾ ಸುಮಾರು 1 ಕಿ.ಲೋ.ಮೀಟರ್ ಕಾಲ್ನಡಿಗೆ ನಡೆದಿದ್ದು, ಗಣ್ಯರು ಸಾಥ್ ನೀಡಿದರು.

ಸಮಸ್ಯೆ ತೆರೆದಿಟ್ಟ ಸಾರ್ವಜನಿಕರು: ನಗರದ ಅಡೇಪೇಟೆಯ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿದ್ದು, ಕಾಮಗಾರಿ ಆರಂಭಿಸಬೇಕು. ನಗರದ ಇತಿಹಾಸ ಪ್ರಸಿದ್ಧ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಶಿಥಿಲಗೊಂಡಿದ್ದು, ದೇವಾಲಯಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ಪೇಟೆ ಬೀದಿಯಲ್ಲಿನ ವರ್ತಕರ ಅನುಕೂಲಕ್ಕಾಗಿ ಶೌಚಗೃಹ, ನಗರ ಎಬಿನೇಜರ್ ಶಾಲೆಯ ರಾಜಗಾಲುವೆ ಸಮೀಪ ಮೇಲ್ಸೆತುವೆ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆ ಸೇರಿ ನಗರದ ವಾಜರಹಳ್ಳಿ ರಸ್ತೆ ನಿರ್ಮಾಣ ಸೇರಿ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ಶಾಲೆ ಬಳಿ ಮೇಲ್ಸೆತುವೆ ನಿರ್ಮಿಸುವಂತೆ ಮನವಿ ಮಾಡಿದ್ದು, ಅದಷ್ಟು ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗುವುದು. ಜತೆಗೆ ಶ್ರೀಕಾಶಿ ವಿಶ್ವೇಶ್ವರ ದೇವಾಲಯಕ್ಕೆ ಸಂಬಂಧಪಟ್ಟಂತೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಜತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net