

ಬಾಗಲಕೋಟೆ: ರಾಜ್ಯದಲ್ಲಿ ವಿವಿಧ ೧೩ ಒಳ ಒಳ ಪಂಗಡಗಳಿಂದ ಗುರುತಿಸಿಕೊಂಡಿರುವ ಗಾಣಿಗ ಸಮಾಜ, ೧೮೯೦ಕ್ಕೂ ಮುಂಚೆಯೇ ಗಾಣದಿಂದ ಎಣ್ಣೆ ತಗೆದೆ ಮನೆ ಮನೆಯ ದೀಪ ಬೆಳಗುವ ಶ್ರೇಷ್ಠತೆ ಹೊಂದಿದೆ. ಸ್ವಾತಂತ್ರ‍್ಯ ಪೂರ್ವವೇ ಪ್ರತಿಯೊಬ್ಬರ ಮನೆಯ ದೀಪ ಬೆಳಗುತ್ತಿದ್ದ ಈ ಸಮಾಜವೇ ಇಂದು ಕತ್ತಲೆಯಲ್ಲಿದೆ. ಸಮಾಜಕ್ಕಾಗಿ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯ ಎಂದು ಅಖಿಲ ಕರ್ನಾಟಕ ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ನಗರದ ಚರಂತಿಮಠ ಸಮುದಾಯ ಭವನದಲ್ಲಿ ಭಾನುವಾರ ಗಾಣಿಗ ಸಮಾಜ ಬಾಗಲಕೋಟೆ ತಾಲೂಕು ಘಟಕ, ಜ್ಯೋತಿ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ, ನೂತನ ಶಾಸಕರ, ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ೨ಎ ಪಂಗಡದಲ್ಲಿ ಗುರುತಿಸುವ ನಮಗೆ ಅವಕಾಶ ಬಹಳ ಕಡಿಮೆ. ರಾಜ್ಯದಲ್ಲಿ ಸುಮಾರು ೫೦ ಲಕ್ಷ ಗಾಣಿಗ ಸಮಾಜವಿದೆ. ಈ ಸಮಾಜದಲ್ಲಿ ೧೩ ಒಳ ಪಂಗಡಗಳಿವೆ. ೧೮೯೦ಕ್ಕೂ ಮುಂಚೆಯೇ ಗಾಣದಿಂದ ಎಣ್ಣೆ ಉತ್ಪಾದನೆ ಮಾಡಿ, ಸಮುದಾಯದ ಮನೆ ಮನೆಯ ದೀಪ ಬೆಳಗುವ ಸಮಾಜ ನಮ್ಮದು. ಎಲ್ಲರ ಮನೆ ಬೆಳಗುವ ನಾವೇ ಇಂದು ಕತ್ತಲೆಯಲ್ಲಿದ್ದೇವೆ. ರಾಜ್ಯದಲ್ಲಿ ಈ ವರೆಗೆ ಆಗಿ ಹೋದ ಎಲ್ಲ ಸರ್ಕಾರಗಳೂ, ಸಮಾಜವನ್ನು ಕಡೆಗಣಿಸುತ್ತ ಬಂದಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿದರು. ಬೇಲೂರಿನ ಮಹಾಂತಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾಣಿಗ ಸಮಾಜದ ಬಾಗಲಕೋಟೆ ತಾಲೂಕು ಅಧ್ಯಕ್ಷ ದುಂಡಪ್ಪ ಏಳೆಮ್ಮಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಗಾಣಿಗ ಸಮಾಜ ಸಂಘದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ, ಜಿಲ್ಲಾ ಅಧ್ಯಕ್ಷ ಅಶೋಕ ಲಾಗಲೋಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ ಇತರರಿದ್ದರು.