

ಅಥಣಿ ಗ್ರಾಮೀಣ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಗೌರವಯುತವಾದ ಸ್ಥಾನವಿದ್ದು, ವೇದ ಪುರಾಣಗಳ ಕಾಲದಿಂದಲೂ ಪಾರ್ವತಿ, ಲಕ್ಷ್ಮಿ, ಸರಸ್ವತಿಯನ್ನು ಆರಾಽಸಲಾಗುತ್ತಿದೆ ಎಂದು ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದ ತಾಂವಶಿ ತೋಟದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮುತ್ತೂರ ಮಹಾಲಕ್ಷ್ಮಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಸತಿ, ತಾಯಿ, ಮಗಳು ಹಾಗೂ ಸಹೋದರಿಯಾಗಿ ಬದುಕಿಗೆ ದಾರಿದೀಪವಾಗುತ್ತಾಳೆ. ಸಹನಾಶೀಲ ಹೆಣ್ಣು ಮಗಳು ಇರುವಲ್ಲಿ ಸುಖ, ಸಂತೋಷ ತುಂಬಿ ತುಳುಕುತ್ತದೆ ಎಂದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಈ ಭಾಗವು ಈಗ ಕೆರೆ ತುಂಬುವ ಹಾಗೂ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗಳಿಂದ ನೀರಾವರಿಯಾಗಲಿದೆ. ಮಹಾಲಕ್ಷ್ಮಿ ದೇವಸ್ಥಾನದ ಸಮುದಾಯದಲ್ಲಿ ಭವನ ನಿರ್ಮಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಲ್ಯಾಳದ ಸಿದ್ಧರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅಥಣಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಗುರುಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖಂಡರಾದ ಶಿವು ಗುಡ್ಡಾಪುರ, ಈರಗೌಡ ಪಾಟೀಲ, ಚಿದಾನಂದ ಮಠಪತಿ, ಶ್ರೀಶೈಲ ತಾಂವಶಿ, ಎಂ.ಎಸ್. ಹಿಪ್ಪರಗಿ, ಬಸವಂತ ಗುಡ್ಡಾಪುರ, ಲಕ್ಷ್ಮಣ ತಾಂವಶಿ, ಅಪ್ಪು ಪೈಲವಾನ್, ಬಾಹುರಾಜ ತಾಂವಶಿ ಇತರರಿದ್ದರು.