ಎಲ್ಲ ಸಮುದಾಯದವರ ಪಕ್ಷ ಬಿಜೆಪಿ, ಕೇಂದ್ರ ಸಚಿವ ಎನ್.ನಾರಾಯಣಸ್ವಾಮಿ ಹೇಳಿಕೆ, ದಾಬಸ್‌ಪೇಟೆಯಲ್ಲಿ ಜನಾಶೀರ್ವಾದ ಯಾತ್ರೆ

17 dpt 5 byake rally
Published on

ದಾಬಸ್‌ಪೇಟೆ: ಬಿಜೆಪಿ ಸಮುದಾಯವೊಂದರ ಪಕ್ಷವಲ್ಲ. ಎಲ್ಲ ಸಮುದಾಯದವರನ್ನೂ ಒಗ್ಗೂಡಿಸಿಕೊಂಡು ರಚನೆಯಾಗಿರುವ ಪಕ್ಷ ಎಂದು ಕೇಂದ್ರ ಸಚಿವ ಎನ್.ನಾರಾಯಣಸ್ವಾಮಿ ಹೇಳಿದರು.

ದಾಬಸ್‌ಪೇಟೆ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದರು. ಕರೊನಾ ಸಂದರ್ಭದಲ್ಲಿ ಉಚಿತ ಲಸಿಕೆ, ಬಡಜನರಿಗೆ ದಿನಸಿ, ಔಷಧ ಸೇರಿ ಎಲ್ಲ ಸವಲತ್ತುಗಳನ್ನು ನೀಡುವಲ್ಲಿ ಕೇಂದ್ರ ಮುಂಚೂಣಿಯಲ್ಲಿದೆ, ಅದೇ ರೀತಿ ರಾಜ್ಯ ಸರ್ಕಾರವೂ ಕರೊನಾ ನಿರ್ವಹಣೆ ಜತೆಗೆ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.

ಪ್ರತಿಪಕ್ಷಗಳ ವಿರುದ್ಧ ಎಂಟಿಬಿ ಕಿಡಿ: ಗ್ರಾಪಂ ಪ್ರತಿನಿಧಿಗಳಿಂದ ಹಿಡಿದು ಸಂಸದರವರೆಗೂ ಆಯ್ಕೆಯಾಗುವ ಪ್ರತಿಯೊಬ್ಬರಿಗೂ ಸಂವಿಧಾನ ಬದ್ಧವಾಗಿರುವ ಕಾನೂನು ಮತ್ತು ಅಧಿಕಾರ ಇದೆ. ಇಂಥ ವ್ಯವಸ್ಥೆಯನ್ನೇ ಹಾಳು ಮಾಡಲು ಪ್ರಯತ್ನಿಸುವ ಪ್ರತಿಪಕ್ಷಗಳ ಹುನ್ನಾರ ಹೆಚ್ಚು ದಿನ ನಡೆಯುವುದಿಲ್ಲ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ, ಕರೊನಾದಂಥ ರಾಷ್ಟ್ರೀಯ ವಿಪತ್ತಿನ ಸಮಯದಲ್ಲೂ ಸರ್ಕಾರಗಳು ಎದೆಗುಂದದೆ ಸಮರ್ಥವಾಗಿ ನಿರ್ವಹಣೆ ಮಾಡುತ್ತಿವೆ ಎಂದರು.

ಹಿಂದಿನ ಸಿಎಂ ಯಡಿಯೂರಪ್ಪ ಅವರ ಜನಪರ ಯೋಜನೆಗಳ ಹಾದಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜನೋಪಯೋಗಿ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ. ಸಂಪತ್ತು ಬಂದಾಗ ದಾನ ಮಾಡು, ಬಡತನ ಬಂದಾಗ ಧ್ಯಾನ ಮಾಡು, ಅಧಿಕಾರ ಬಂದಾಗ ಸೇವೆ ಮಾಡು ಎಂಬ ತತ್ವದ ಆಧಾರದಲ್ಲಿ ನಾವೆಲ್ಲ ನಡೆಯಬೇಕು ಎಂದು ಹೇಳಿದರು.

ಬೈಕ್ ರ‌್ಯಾಲಿ ಮೂಲಕ ಸ್ವಾಗತ: ದಾಬಸ್‌ಪೇಟೆ ಹೆದ್ದಾರಿಯ ಮೇಲ್ಸೇತುವೆ ಬಳಿ ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿ ಮೂಲಕ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರನ್ನು ಬರಮಾಡಿಕೊಂಡರು. ವೀರಗಾಸೆ, ಮಂಗಳವಾದ್ಯ, ತಮಟೆ ವಾದ್ಯಗಳೊಂದಿಗೆ ಗಣ್ಯರ ಮೆರವಣಿಗೆ ಮಾಡಲಾಯಿತು.

ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ವಿ.ನಾಗರಾಜು, ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಎಸ್.ಮಹೇಶ್, ಸಂಘಟನಾ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net