ಎಲ್ಲ ವರ್ಗದವರೂ ಭಾರತ್ ಜೋಡೋ ಬೆಂಬಲಿಸಿ: ಆರ್. ಧರ್ಮಸೇನಾ

Published on

ಮೈಸೂರು: ದೇಶದ ಜನರನ್ನು ಬೆಸೆಯುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಪಾದಯಾತ್ರೆಯಲ್ಲಿ ದಲಿತರು ಸೇರಿದಂತೆ ಎಲ್ಲ ವರ್ಗದವರು ಭಾಗವಹಿಸಬೇಕು ಎಂದು ಕೆಪಿಸಿಸಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ಆರ್.ಧರ್ಮಸೇನ ಮನವಿ ಮಾಡಿದರು.
ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ತಲೆದೋರಿದೆ. ಧರ್ಮ-ಜಾತಿ ಹೆಸರಿನದಲ್ಲಿ ಬಿಜೆಪಿ ದೇಶ ವಿಭಜನೆ ಮಾಡುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದ್ದು, ದಲಿತರು, ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಹುಲ್‌ಗಾಂಧಿ ಅವರು ಭಾರತ್ ಜೋಡೋ ಏಕತಾ ಪಾದಯಾತ್ರೆ ಕೈಗೊಂಡಿದ್ದು, ಇದು ಸ್ವಾತಂತ್ರೃ ಸಂಗ್ರಾಮದ ಬಳಿಕ ನಡೆಯುತ್ತಿರುವ ಅತಿದೊಡ್ಡ ಪಾದಯಾತ್ರೆಯಾಗಿದೆ. ಜನರಿಗೆ ಕಾಂಗ್ರೆಸ್ ಈಗ ಆಶಾಕಿರಣವಾಗಿ ಕಾಣಿಸುತ್ತಿದ್ದು, ಪಕ್ಷದತ್ತ ನೋಡುತ್ತಿದ್ದಾರೆ. ದಲಿತರು, ಅಲ್ಪ ಸಂಖ್ಯಾತರು ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಸುಮಾರು 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಜಿಪಂ, ತಾಪಂ ಅಲ್ಲದೆ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿವೆ. ಹೀಗಾಗಿ ಈ ಪಾದಯಾತ್ರೆ ಅತಿ ಪ್ರಮುಖವಾಗಿದ್ದು, ಕಾರ್ಯಕರ್ತರು ಸಹಕರಿಸಬೇಕಿದೆ ಎಂದು ಹೇಳಿದರು.
ಮುಖಂಡರಾದ ಕೆ. ರಮೇಶ್, ಸಿದ್ದರಾಜು, ಗೀತಾ, ಮಂಡಕಳ್ಳಿ ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net