ಎಲ್ಲ ವರ್ಗಗಳಿಗೆ ಪ್ರಾಶಸ್ತ್ಯ ನೀಡಲಿದೆ

Published on

ಬಳ್ಳಾರಿ : ಬಜೆಟ್ ಹಂಚಿಕೆ ಮಾಡುವ ಸಂದರ್ಭದಲ್ಲಿ ಎಲ್ಲ ವರ್ಗಗಳಿಗೆ ಪ್ರಾಶಸ್ತ್ಯವನ್ನು ನೀಡಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ ಹೇಳಿದರು.
ಇಲ್ಲಿನ ಎಸ್‌ಎಸ್‌ಎ ಕಾಲೇಜಿನಲ್ಲಿ ಅರ್ಥಶಾಸ್ತ ಮತ್ತು ರಾಜ್ಯಶಾಸ್ತ ವಿಭಾಗಗಳ ಸಹಯೋಗದೊಂದಿಗೆ ಆಯೋಜಿಸಿದ್ದ 2024-25ನೇ ಸಾಲಿನ ಬಜೆಟ್ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಸರ್ಕಾರವು ಬಜೆಟ್ ಮಂಡನೆಯ ಸಂದರ್ಭದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆಗಳನ್ನು ನಿರೀಕ್ಷಿಸುತ್ತದೆ. ಕೆಲವೊಮ್ಮೆ ಸರ್ಕಾರಗಳಿಗೆ ಅನಿರೀಕ್ಷಿತವಾಗಿ ವೆಚ್ಚಗಳು ಎದುರಾಗುತ್ತವೆ. ಅಭಿವೃದ್ಧಿ ಎಂದರೆ ಕಟ್ಟಡ, ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದು ಮಾತ್ರ ಅಭಿವೃದ್ಧಿ ಅಲ್ಲ. ಆರ್ಥಿಕ ಸಮೃದ್ಧತೆ ಎಂದರೆ ಸಮಗ್ರ ಜನರ ಸಮೃದ್ಧಿಯಾಗಬೇಕು. ಆರೋಗ್ಯ, ಶಿಕ್ಷಣ, ಸಮಾಜಸೇವೆಗೆ ಒತ್ತು ನೀಡಬೇಕು ಎಂದರು.
ಕೇಂದ್ರ ಸರ್ಕಾರವು ನ್ಯಾಷನಲ್ ಹೆಲ್ತ್ ಸರ್ವೇ ಸಂಸ್ಥೆಯು ಪ್ರತಿ ಐದು ವರ್ಷಕ್ಕೊಮ್ಮೆ ಆರೋಗ್ಯ ಸ್ಥಿತಿಯ ಬಗ್ಗೆ ಸಮೀಕ್ಷೆ ಮಾಡುತ್ತಿದೆ. ದೇಶದ 5ನೇ ಸಮೀಕ್ಷೆ 2019-20ರಲ್ಲಿ ನಡೆದಿದೆ. ಈ ಸಮೀಕ್ಷೆಯಲ್ಲಿ ಬಳ್ಳಾರಿ, ರಾಯಚೂರು ಭಾಗದ ಮಹಿಳೆ ಮತ್ತು ಮಕ್ಕಳಲ್ಲಿ ಅನಿಮೀಯತೆ ಹೆಚ್ಚಿದೆ. ಆ ಕಾರಣಕ್ಕಾಗಿಯೇ ಈ ಭಾಗದ ಮಕ್ಕಳು ವಿಜ್ಞಾನ ವಿಷಯವನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳದೆ ಕಲಾ ಮತ್ತು ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಪದವಿ ಪೂರೈಸುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net