ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸುವ ಬಿಜೆಪಿ, ಶಾಸಕ ಮಹೇಶ್ ಅಭಿಮತ, ವಿವಿಧ ಮುಖಂಡರು ಪಕ್ಷ ಸೇರ್ಪಡೆ

12 ank photo 1
Published on

ಆನೇಕಲ್: ಪರಿಶಿಷ್ಟ ಜಾತಿ ಮತ್ತು ವರ್ಗ, ಹಿಂದುಳಿದ ವರ್ಗಗಳು ಸೇರಿ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಶಿಷ್ಟ ಜಾತಿ ಮತ್ತು ವರ್ಗದ 23 ಮಂದಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದಾರೆ. ಇದು ಅವರ ಸಾಮಾಜಿಕ ನ್ಯಾಯ ಮತ್ತು ಬದ್ಧತೆಗೆ ಪ್ರತೀಕ ಎಂದು ಕೊಳ್ಳೆಗಾಲ ಶಾಸಕ ಎನ್. ಮಹೇಶ್ ತಿಳಿಸಿದರು.

ತಾಲೂಕಿನ ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಳೆನಲ್ಲಸಂದ್ರದಲ್ಲಿ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿದೆ. ತನ್ಮೂಲಕ ಸಂವಿಧಾನ ಶಿಲ್ಪಿಗೆ ಅರ್ಹ ಗೌರವ ಸಲ್ಲಿಸಿದೆ. ದಶಕಗಳಿಂದಲೂ ಪರಿಶಿಷ್ಟ ಜಾತಿ ಮತ್ತು ವರ್ಗವನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್ ಈ ವರ್ಗಗಳಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದರು.

ಬೆಲೆ ಏರಿಕೆಗೆ ಆಮದು ಕಾರಣ: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಅವುಗಳ ಬೆಲೆ ಏರಿಕೆ ಆಗುತ್ತಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ 1.5 ಲಕ್ಷ ಕೋಟಿ ರೂ. ಹಣವನ್ನು ವಿದ್ಯುತ್‌ಚಾಲಿತ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ. ಈ ದಿಸೆಯಲ್ಲಿ ಸಂಶೋಧನೆ ಮತ್ತು ಅನುಷ್ಠಾನ ಕಾರ್ಯಗಳು ನಡೆಯುತ್ತಿದೆ ಎಂದು ಎನ್. ಮಹೇಶ್ ಹೇಳಿದರು.

ಸಿದ್ಧವಾಗುತ್ತಿದೆ ಬೃಹತ್ ಯೋಜನೆ: ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ಯುವ ಸಮುದಾಯ, ವಿದ್ಯಾವಂತರು ಬಿಜೆಪಿಯನ್ನು ಬೆಂಬಲಿಸಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿ ಸರ್ವ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಪಕ್ಷವಾಗಿದೆ ಎಂದರು.

ಮುಖಂಡರಾದ ನರೇಂದ್ರ, ಅಭಿಲಾಷ್, ಗೋಪಾಲ್, ಮಂಜುನಾಥ್ ಮತ್ತಿತರರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಕಲ್ಲುಬಾಳು ಗ್ರಾಪಂ ಅಧ್ಯಕ್ಷೆ ನಾಗಮ್ಮ, ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಚೌಡಪ್ಪ, ಮುಖಂಡರಾದ ರಾಮಕೃಷ್ಣ, ಮೈಕೋ ನಾಗರಾಜು, ರಮೇಶ್, ಪಿಳ್ಳಪ್ಪ, ಮರಿರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net