ಎಲ್ಲ ಭಕ್ತರಿಗೂ ಶೀಘ್ರ ಹಾಸನಾಂಬೆ ದರ್ಶನ ಸಿಗಲಿ: ಜಿಲ್ಲಾಡಳಿಕ್ಕೆ ಮನವಿ

ಎಲ್ಲ ಭಕ್ತರಿಗೂ ಶೀಘ್ರ ಹಾಸನಾಂಬೆ ದರ್ಶನ ಸಿಗಲಿ: ಜಿಲ್ಲಾಡಳಿಕ್ಕೆ ಮನವಿ
Published on

ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಕ್ಟೋಬರ್ 24 ರಂದು ಹಾಸನಾಂಬೆ ದೇಗುಲ ಬಾಗಿಲು ತೆಗೆಯಲಿದ್ದು, 9 ದಿನಗಳ ಕಾಲ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಹಾಸನಾಂಬೆ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಎಲ್ಲ ಭಕ್ತರಿಗೂ ಸುಗಮವಾಗಿ ಹಾಗೂ ಶೀಘ್ರವಾಗಿ ಶ್ರೀ ಹಾಸನಾಂಬೆ ದೇವಿಯ ದರ್ಶನ ಸಿಗುವಂತೆ ವ್ಯವಸ್ಥೆ ಮಾಡಿ ಎಂದು ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಐಎಂಎ ಮಾಜಿ ಜಿಲ್ಲಾಧ್ಯಕ್ಷ ಡಾ. ಎನ್. ರಮೇಶ್ ಮಾಧ್ಯಮದೊಂದಿಗೆ ಮಾತನಾಡಿ, ವರ್ಷದಲ್ಲಿ ಕೇವಲ ಒಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಕ್ಷಣ ಮಾತ್ರ ದರ್ಶನದಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ವಿಐಪಿ ದರ್ಶನ ವ್ಯವಸ್ಥೆಯನ್ನು ಎರಡು ದಿನಗಳಿಗೆ ಸೀಮಿತಗೊಳಿಸಿ, ಉಳಿದ ಏಳು ದಿನಗಳಲ್ಲಿ ಕಡ್ಡಾಯವಾಗಿ ವಿಐಪಿ ದರ್ಶನ ನಿಷೇಧಿಸಬೇಕು. ವಿಐಪಿಗಳು ಮತ್ತು ಅವರ ಜತೆ ಬರುವ ಹಿಂಬಾಲಕರಿಂದಾಗಿ ದೇವಿಯ ದರ್ಶನ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಕಳೆದ ವರ್ಷ ದೇವಿಯ ದರ್ಶನಕ್ಕೆ ಜನರು ಎಂಟರಿಂದ ಹತ್ತು ಗಂಟೆವರೆಗೂ ಸಾಲಿನಲ್ಲಿ ನಿಲ್ಲುವಂತಾಗಿತ್ತು. ದೇವಸ್ಥಾನದ ಗರ್ಭಗುಡಿಯ ಒಳಗೆ ಅರ್ಚಕರನ್ನು ಹೊರತುಪಡಿಸಿ ಇತರರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿದರು.
ಶ್ರೀ ಸಿದೇಶ್ವರ ದೇವಾಲಯದ ಪ್ರಾಂಗಣದಲ್ಲಿ ಪ್ಲೆಕ್ಸ್ ಅಳವಡಿಸಿ ಸುದ್ದಿಗೋಷ್ಠಿ ಅಥವಾ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭಗಳನ್ನು ನಿಷೇಧಿಸಬೇಕು. ದರ್ಶನವಾದ ನಂತರ ದೇವಾಲಯದ ಪ್ರಾಂಗಣದಲ್ಲಿ ಒಂದು ಕ್ಷಣವಾದರೂ ಭಕ್ತರು ಕುಳಿತುಕೊಳ್ಳುವುದು ಹಿಂದು ಸಂಪ್ರದಾಯದ ವಾಡಿಕೆ. ಹಾಸನಾಂಬೆ ದೇವಾಲಯದಲ್ಲೂ ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ. ಪ್ರಸ್ತುತ ಅದಕ್ಕೆ ಅವಕಾಶವಿಲ್ಲದಂತೆ ಆಗಿದೆ. ಹಾಸನಾಂಬೆ ತಾಯಿ ಪೂಜಾ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಶಾಸ್ತ್ರದ ಪ್ರಕಾರ, ಸಾಂಪ್ರದಾಯಿಕ ರೀತಿಯಲ್ಲಿ ಅಮ್ಮನವರಿಗೆ ಪೂಜೆ ನಡೆಸಬೇಕು. ಶ್ರೀ ಹಾಸನಾಂಬೆ ದೇವಾಲಯಕೆ, ಭೇಟಿ ನೀಡುವ ಭಕ್ತರಿಗೆ, ಸರದಿ ಸಾಲಿನಲ್ಲಿ ನಿಂತವರಿಗೆ ದರ್ಶನದ ನಂತರ ಅರಿಶಿನ ಕುಂಕುಮ ಪ್ರಸಾದ, ಹೂವು ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು. ಆಂಗ್ಲ ಭಾಷೆಯಲ್ಲಿ ಹಾಸನ್ ಎಂಬುದನ್ನು ಹಾಸನ ಎಂದು ಶ್ರೀ ಹಾಸನಾಂಬೆ ದೇವಿ ಜಾತ್ರೆ ಸಮಯದಲ್ಲಿ ಘೋಷಿಸಬೇಕು. ಶ್ರೀ ಹಾಸನಾಂಬೆ ದೇವಿಯ ಪ್ರಾಂಗಣದಲ್ಲಿರುವ ಪರಿವಾರ ದೇವತೆಗಳ ಮುಂದೆ ಬ್ಯಾರಿಕೇಡ್ ಅಳವಡಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಬೇಕು. ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ಥೆ ಕಲ್ಪಿಸಬೇಕು ಹಾಗೂ ತೀರಾ ಗಣ್ಯಾತಿಗಣ್ಯರನ್ನು ಹೊರತುಪಡಿಸಿ ಇನ್ನಿತರ ಎಲ್ಲರಿಗೂ ಗರ್ಭಗುಡಿ ಒಳಗೆ ಹೋಗಲು ಪ್ರವೇಶ ನಿಷೇಧ ಮಾಡುವಂತೆ ಮನವಿ ಮಾಡಿದರು.
ಇದೆ ವೇಳೆ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಹಿಂದು ಜನಜಾಗೃತಿ ವೇದಿಕೆಯ ಗೋವಿಂದರಾಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net