

ಮೈಸೂರು: ಆದಿಕವಿ ಪಂಪನನ್ನು ಓದಿದವರು ಕಡಿಮೆ. ಆದರೆ ಎಲ್ಲ ತಲೆಮಾರಿಗೆ ಸಲ್ಲುವಂತಹ, ಓದಿಸಿಕೊಳ್ಳುವಂತಹ ಪ್ರೌಢಿಮೆ ಕುಮಾರವ್ಯಾಸ ಕಾವ್ಯಕ್ಕೆ ಇದೆ ಎಂದು ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ತಿಳಿಸಿದರು.
ಕಾವ್ಯರಂಜನೀ ಸಭಾ ಮತ್ತು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಗಾನಭಾರತಿಯಲ್ಲಿ ಭಾನುವಾರ ಆಯೋಜಿಸಿದ್ದ ಕುಮಾವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ಆದಿ ಪರ್ವದ ಸಂಪೂರ್ಣ ಪದ್ಯಗಳ ಗಮಕ ವಾಚನದ ಆಡಿಯೋ, ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಮಾರವ್ಯಾಸನ ಪಾತ್ರ ಸೃಷ್ಟಿಗಳು ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಪಾತ್ರಗಳೇ. ಆದ್ದರಿಂದ ಆತ ವ್ಯಾಪಕವಾದ ಜನಪ್ರಿಯತೆ ಕಂಡ ಜನಪ್ರಿಯ ಕವಿ. ಕುಮಾರವ್ಯಾಸ ಕಾವ್ಯವನ್ನು ಎಲ್ಲ ಗ್ರಾಮೀಣರು ಕೂಡ ಓದಿದ್ದಾರೆ. ಜನರಿಗೆ ಬೇಕಾದ ಭಾಷೆಯಲ್ಲಿ ಬರೆದ ಕವಿ, ಅದಕ್ಕಾಗಿಯೇ ಅವನು ಬರೆದು 5 ಶತಮಾನ ಕಳೆದರೂ ಜನ ಇನ್ನೂ ಸ್ವೀಕರಿಸಿದ್ದಾರೆ ಎಂದರು.
ಬದುಕನ್ನು ಜೀರ್ಣಸಿಕೊಂಡು, ಪಂಪ, ಪೊನ್ನ ಬಹುಮುಖ್ಯವಾಗಿ ವಚನಕಾರರನ್ನು ಜೀರ್ಣಿಸಿಕೊಂಡು ನೈಜತೆಯ ಮಹಾಕಾವ್ಯ ಬರೆದಿದ್ದಾನೆ. 1956ರಲ್ಲಿ ಕೆಂಗಲ್ ಹನುಮಂತಯ್ಯ ಕುಮಾರವ್ಯಾಸನ ಪುಸ್ತಕವನ್ನು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮತ್ತು ಕುವೆಂಪು ಅವರ ಸಂಪಾದಕತ್ವದಲ್ಲಿ ಪ್ರಕಟಿಸಿದಾಗ 40 ಸಾವಿರ ಕೃತಿಗಳು ಮಾರಾಟವಾಗಿದ್ದವು ಎಂದು ಸ್ಮರಿಸಿದರು.
ಅಕ್ಷರಕ್ಕೆ ಎಂದಿಗೂ ಸಾವು ಇಲ್ಲ. ಈಗಿನ ಕಾಲದ ಕೆಲ ಮಕ್ಕಳ ನಾಲಿಗೆಗೆ ಕನ್ನಡ ಪದಗಳು ಬಂದಿವೆ. ಅಪ್ಪಿತಪ್ಪಿ ಅವರ ಹೃದಯಕ್ಕೆ ಕನ್ನಡ ಪದಗಳು ಇಳಿದರೆ ಕನ್ನಡ ಬದುಕಿತು ಎಂದರ್ಥ ಎಂದರು.
ಪಂಪನ ಪುಸ್ತಕ ಡಿಜಿಟಲ್ ರೂಪದಲ್ಲಿ ಬರುತ್ತಿರುವುದು ಸಂತಸ ತಂದಿದೆ. ಮೊಬೈಲ್ ಕೈಯಲ್ಲಿ ಹಿಡಿದರೆ ಕೆಸರಿನಲ್ಲಿ ಕಮಲ ಹಿಡಿದಂತೆ. ಹಿಂದೆ ಪುಸ್ತಕ ಹಿಡಿದು ಓದುತಿದ್ದರು. ಇಂದು ಅದನ್ನು ಧ್ವನಿಯ ಮೂಲಕ ಎಲ್ಲಿ ಬೇಕಾದರೂ ಕೇಳಿಸಿಕೊಳ್ಳುವ ರೀತಿ ಮಾಡಿದ ಕೆಲಸ ಬಹಳ ದೊಡ್ಡದು ಎಂದು ಶ್ಲಾಘಿಸಿದರು.
ಬಳಿಕ ಅರಿವು ಶಾಲಾ ಮಕ್ಕಳು ‘ಬೆರಗಲಾ ಭಾರತವು’ ಕುಮಾರವ್ಯಾಸ, ಪಂಪ ಮತ್ತು ರನ್ನರ ಭಾರತಗಳಂದ ಆಯ್ದ ಪದ್ಯಗಳ ವಾಚನಾಭಿನಯ ಪ್ರಸ್ತುತ ಪಡಿಸಿದರು. ಕೃ.ರಾಮಚಂದ್ರ, ಜ್ಯೋತಿ ಶಂಕರ್, ಸತ್ಯಲಕ್ಷ್ಮೀಅನಂತಪದ್ಮನಾಭ, ವಸಂತಾ ವೆಂಕಟೇಶ್, ಎಂ.ಎನ್.ಮಂಜುನಾಥ್ ಉಪಸ್ಥತರಿದ್ದರು.