

ಚಿತ್ರದುರ್ಗ: ಸೈಬರ್ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆಗೆ ಅಗತ್ಯವಿರುವ ಮಾಹಿತಿ ತಂತ್ರಜ್ಞಾನದ ಅರಿವು ಪಡೆದುಕೊಳ್ಳುವಂತೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬೇಸಿಕ್ ಸೈಬರ್ ಕ್ರೈಂ ಇನ್‌ವೆಸ್ಟಿಗೇಷನ್ ಕುರಿತ ಒಂದು ದಿನದ ತ ರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸೈಬರ್ ಅಪರಾಧಗಳನ್ನು ತ್ವರಿತಗತಿಯಲ್ಲಿ ಭೇದಿಸಿ ನೊಂದವರಿಗೆ ನ್ಯಾಯ ಒದಗಿಸಲು ಮಾಹಿತಿ ತಂತ್ರಜ್ಞಾನ ಹಾಗೂ ಇದಕ್ಕಾಗಿ ರೂಪಿಸಿರುವ ಹಲವು ತಂತ್ರಾಂಶಗಳ ಕುರಿತ ತಿಳಿವಳಿಕೆ ಅಗತ್ಯವಿದೆ ಎಂದರು.
ಸೈಬರ್‌ಕ್ರೈಂ ರಿಪೋರ್ಟಿಂಗ್, ಸೈಬರ್ ಪೊಲೀಸ್, ಸಮನ್ವಯ, ಸಂಚಾರ ಸಾರಥಿ ಹಾಗೂ ಸೋಷಿಯಲ್ ಮೀಡಿಯಾ ಎಲ್‌ಇಎ ಪೋರ್ಟಲ್‌ಗಳನ್ನು ಸಮರ್ಥವಾಗಿ ಬಳಸಿಕೊಂಡು ಸೈಬರ್ ಪೊಲೀಸ್ ಠಾಣೆಯಂತೆ, ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿ, ಸೈಬರ್‌ಅಪರಾಧ ಪ್ರಕರಣಗಳ ತನಿಖೆ ನಡೆಸಬೇಕು ಎಂದರು.
ಚಿತ್ರದುರ್ಗ ಸೈಬರ್ ಠಾಣೆ ಡಿವೈಎಸ್‌ಪಿ ಉಮೇಶ್‌ನಾಯಕ್, ಚಿತ್ರದುರ್ಗ ಡಿವೈಎಸ್‌ಪಿ ಪಿ.ಕೆ. ದಿನಕರ್, ಚಳ್ಳಕೆರೆ ಡಿವೈಎಸ್‌ಪಿ ಟಿ. ರಾಜಣ್ಣ, ಹಿರಿಯೂರು ಡಿವೈಎಸ್‌ಪಿ ಶಿವಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ಸ್, ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.