

ದಾವಣಗೆರೆ: ಜಾನಪದ, ಶಾಸ್ತ್ರೀಯ ಮೊದಲಾದ ನಾನಾ ಸಂಗೀತ ಪ್ರಾಕಾರಗಳಿವೆ. ವಿಶ್ವದ ಎಲ್ಲ ಜೀವರಾಶಿಗೂ ಅದಮ್ಯ ಚೇತನ ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
ಅದಮ್ಯ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರದೇಶ, ಭಾಷೆಗೂ ಮೀರಿ ತನ್ನ ಛಾಪು ಮೂಡಿಸುವ ಶಕ್ತಿ ಸಂಗೀತಕ್ಕಿದೆ. ಹಿಂದೂಸ್ತಾನಿ ಹಾಗೂ ಕರ್ನಾಟಕ ಎಂಬ ಸಂಗೀತ ಪ್ರಭೇದಗಳಿವೆ. ಈ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿರುವ ಲತಾ ಮಂಗೇಶ್ಕರ್, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಮೊದಲಾದವರು ಸ್ಮರಣೀಯರು ಎಂದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯ ವಿದ್ವಾನ್ ಎಂ. ದ್ವಾರಕೀಶ್ ಮಾತನಾಡಿ 1982ರಿಂದ ವಿಶ್ವ ಸಂಗೀತ ದಿನ ಆಚರಣೆಗೆ ಬಂದಿದೆ. ಸಂಗೀತವು ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ. ಸಂಗೀತ ಆಸ್ವಾದನೆಯಿಂದ ಮಾನಸಿಕ ಉಲ್ಲಾಸ, ನೆಮ್ಮದಿ, ಏಕಾಗ್ರತೆ ಹಾಗೂ ಶ್ರದ್ಧೆ ವೃದ್ಧಿಗೆ ಸಹಕಾರಿ ಎಂದು ಹೇಳಿದರು.
ಅದಮ್ಯ ಕಲಾ ಸಂಸ್ಥೆಯ ಮುಖ್ಯಸ್ಥೆ ಗೀತಾ ಮಾಲತೇಶ್, ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ, ವೀರೇಶ್ವರ ಪುಣ್ಯಾಶ್ರಮದ ಸಹ ಕಾರ್ಯದರ್ಶಿಯಾದ ಜಾಲಿಮರದ ಕರಿಬಸಪ್ಪ, ಸಾಹಿತಿ ಬಾ.ಮ. ಬಸವರಾಜಯ್ಯ, ವಿಶ್ವನಾಥ ಮುದಜ್ಜಿ, ದಿಳ್ಯೆಪ್ಪ, ರೇವಣಸಿದ್ದಪ್ಪ ಅಂಗಡಿ ಇದ್ದರು. ಗೀತಾ ಮಹಾಂತೇಶ್ ಪ್ರಾಸ್ತಾವಿಕ ಮಾತನಾಡಿದರು. ಆಶಾ ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ವಂದಿಸಿದರು. ನಂತರ ಸಂಗೀತ ಕಾರ್ಯಕ್ರಮ ನಡೆಯಿತು.
--