ಎಲ್ಲ ಜಿಲ್ಲೆಯಲ್ಲೂ ಮಾವಿಗೆ ಮಾರುಕಟ್ಟೆ: ಕೆ.ವಿ.ನಾಗರಾಜು ಭರವಸೆ

1CBP5Mango
Published on

ಚಿಂತಾಮಣಿ/ಚಿಕ್ಕಬಳ್ಳಾಪುರ : ಎಲ್ಲ ಜಿಲ್ಲೆಗಳಲ್ಲೂ ಮಾವಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು ತಿಳಿಸಿದರು.

ಇತ್ತೀಚೆಗೆ ಚಿಂತಾಮಣಿಯ ಮಾಡಿಕೆರೆಯ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಕೈಗೊಂಡಿದ್ದ ಮಾವಿನಲ್ಲಿ ರೋಗ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮಾವು ಬೆಳೆಯುವಂತೆ ಪ್ರೋತ್ಸಾಹಿಸಲು ಉತ್ತಮ ಬೆಲೆ, ಮಾರುಕಟ್ಟೆ ಸೇರಿ ಹಲವು ಸವಲತ್ತುಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೇಳ, ವಿವಿಧೆಡೆಗೆ ಸಾಗಾಣೆ, ನೇರ ಮಾರಾಟ ವ್ಯವಸ್ಥೆ ಸೇರಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.

ರೋಗ ನಿರ್ವಹಣೆಯ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಡಾ. ಹಿತ್ತಲಮನಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. ಈಗಾಗಲೇ ಬಹುತೇಕ ಕಡೆ ಗಿಡಗಳಲ್ಲಿ ಹೂ ಸಂಪೂರ್ಣವಾಗಿ ಬಂದಿದ್ದು, ಈ ವೇಳೆ ರೈತರು ಅನವಶ್ಯಕವಾಗಿ ಕೀಟನಾಶಕಗಳನ್ನು ಬಳಸಬಾರದು. ಕೀಟಗಳಿಂದ ಹಾನಿ ಇದ್ದಲ್ಲಿ ಮಾತ್ರ ಉಪಯೋಗಿಸಬೇಕೆಂಬ ಸಲಹೆ ನೀಡಿದರು.

ಮುಂಜಾನೆಯಲ್ಲಿ ಹೆಚ್ಚು ಚಳಿ ಮತ್ತು ಇಬ್ಬನಿಯ ವಾತಾವರಣದಲ್ಲಿ ಮಾವಿಗೆ ಬೂದಿರೋಗ ಮತ್ತು ಹೂ ಒಣಗುವ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ, ಶಿಲೀಂಧ್ರ ನಾಶಕಗಳಾದ ಥಯೋಫಿನೇಟ್ ಮಿಥೈಲ್ (70%) 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಇಲ್ಲವೇ ಡೈನೊಕ್ಯಾಪ್ (ಶೇ.48%) 1 ಮಿ.ಲೀ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಮತ್ತು ಮ್ಯಾಂಕೋಜೆಬ್ (75%) 2 ಗ್ರಾಂ.ಅನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವಂತೆ ಮಾಹಿತಿ ನೀಡಿದರು.

ಸವಲತ್ತಿಗೆ ರೈತರ ಮನವಿ : ಮಾಡಿಕೆರೆ ತೋಟಗಾರಿಕೆ ಕ್ಷೇತ್ರದಲ್ಲಿ ಬೂಮರ್ ಸ್ಪ್ರೇಯರ್ ಪ್ರಾತ್ಯಕ್ಷತೆ ನಡೆಯಿತು. ಮಾವು ಪುನಃಶ್ಚೆತನ, ಕೀಟನಾಶಕ ಸಿಂಪಡಣೆ, ಪ್ಯಾಕ್‌ಹೌಸ್ ನಿರ್ಮಾಣ, ಯಾಂತ್ರೀಕರಣಕ್ಕೆ ಸಹಾಯಧನ ಒದಗಿಸಲು, ಹೊರ ರಾಜ್ಯಗಳಿಗೆ ಅಧ್ಯಯನ ಪ್ರವಾಸ, ಬೆಂಬಲ ಬೆಲೆ ನಿಗದಿ ಸೇರಿ ಹಲವು ಸವಲತ್ತುಗಳಿಗೆ ರೈತರು ನಿಗಮದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net