

ಹೊಳೆನರಸೀಪುರ: ಕೇಂದ್ರ ಸರ್ಕಾರವು ರೂಪಿಸಿರುವ ಯೋಜನೆಗಳು ಎಲ್ಲ ಜಾತಿ, ಧರ್ಮ ಹಾಗೂ ಲಿಂಗಗಳಿಗೂ ಅನ್ವಯಿಸುವಂತಹ ಯೋಜನೆಗಳಾಗಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿಶೇಷವಾಗಿ ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಸದಾ ಶ್ರಮಿಸುತ್ತಿದೆ. ಹೆಣ್ಣುಮಕ್ಕಳ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದಂತೆ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.
2014ರಲ್ಲಿ 14 ಕೋಟಿ ಅನಿಲ ಸಂಪರ್ಕ ನೀಡಲಾಗಿತ್ತು. ಈಗ 32 ಕೋಟಿಗೂ ಅಧಿಕ ಸಂಪರ್ಕ ನೀಡಿದ್ದು 10 ಕೋಟಿಗೂ ಅಧಿಕ ಮಹಿಳೆಯರು ಉಜ್ವಲ್ ಯೋಜನೆಯಡಿ ಉಚಿತ ಸಂಪರ್ಕ ಹೊಂದಿದ್ದಾರೆ. ಅಂತ್ಯೋದಯ ಯೋಜನೆಯಡಿ 80 ಕೋಟಿಗೂ ಅಧಿಕ ಜನರಿಗೆ ಉಚಿತವಾಗಿ ಆಹಾರವನ್ನು ನೀಡುವ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಆಯುಷ್ಮ್ಮಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಆಸ್ವತ್ರೆಯ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನವೂ ಪ್ರತಿಯೊಂದು ಹಳ್ಳಿಗೂ ಸಂಚರಿಸಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಯೋಜನೆಗಳ ಸೌಲಭ್ಯಗಳನ್ನು ಪಡೆಯದಿರುವ ಅರ್ಹ ಫಲಾನುಭವಿಗಳು ಸ್ಥಳದಲ್ಲೇ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯಬಹುದು ಎಂದು ಹೇಳಿದರು.