

ಹಾಸನ: ಮಹಿಳೆಯರು ಇಂದು ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರು ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ನೋವುಗಳನ್ನು ಹೋಗಲಾಡಿಸಲು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಆರ್ಥಿಕ ಸ್ವಾವಲಂಬಿಯಾಗುವುದರ ಜತೆಗೆ ಆರ್ಥಿಕ ಹಾಗೂ ಸಾಮಾಜಿಕ ಎಲ್ಲಾ ರೀತಿಯಲ್ಲಿಯೂ ಸ್ವಾವಲಂಬಿಗಳಾಗಿ ಇರಬೇಕು ಎಂದು ತಿಳಿಸಿದರು.
ಹೆಣ್ಣು ಮಕ್ಕಳಿಗೆ ಸಂವಿಧಾನದಲ್ಲಿ ಎಲ್ಲಾ ರೀತಿಯ ಸಮಾನತೆ ಹಕ್ಕುಗಳನ್ನು ನೀಡಲಾಗಿದೆ. ಮಹಿಳೆಯರು ಎಷ್ಟೇ ಸಮಸ್ಯೆಗಳು ಬಂದರೂ ಅವುಗಳನ್ನು ಹೋಗಲಾಡಿಸಿ ಬೆಳಕನ್ನು ಪಡೆದುಕೊಳ್ಳುವ ಸಮರ್ಥ್ಯ ಹೊಂದಕೊಳ್ಳಬೇಕು. ಮಹಿಳೆಯರು ಎಲ್ಲಾ ರಂಗದಲ್ಲೂ ಕರ್ತವ್ಯ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ್ ಅವರು ಮಾತನಾಡಿ, ಮಹಿಳೆಯರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗಿದೆ. ಕಾನೂನಿನಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲಾ ತರಹದ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಮಹಿಳೆಯರಿಗೆ ಸಹಕಾರಿಯಾಗುವಂತಹ ಸಾಕಷ್ಟು ಕಾನೂನುಗಳು ಇವೆ. ಹಾಗೆಯೇ ಮಹಿಳೆಯರ ಭದ್ರತೆಗಾಗಿ ಇರುವ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು. ಕಾನೂನನ್ನು ಸರಿಯಾಗಿ ತಿಳಿಯದೆ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಮರ್ಪಕವಾಗಿ ಕಾನೂನು ಬಳಕೆ ಮಾಡಿಕೊಳ್ಳಬೇಕು. ಸಮಾಜಕ್ಕೆ ಅನ್ಯಾಯವಾಗದಂತೆ ನಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂದರೆ ಸರಿಯಾದ ರೀತಿಯಲ್ಲಿ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಡಾ. ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ, ಸಂವಿಧಾನ ಬರುವುದಕ್ಕೆ ಮುಂಚೆ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಟ್ಟವರು ಕಲ್ಯಾಣ ರಾಜ್ಯದ ಮೈಸೂರು ಮಹಾರಾಜರು. ಪ್ರಜಾಪ್ರಭುತ್ವದ ನಂತರ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೂ ಹೆಣ್ಣು ಮಕ್ಕಳ ವಿಷಯದಲ್ಲಿ ಕೆಲ ಕಲ್ಪನೆಗಳು ಬದಲಾಗಬೇಕಿದೆ. ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗುಗಳನ್ನು ತಡೆಗಟ್ಟುವ ಅವಶ್ಯಕತೆ ಇದೆ ಎಂದರು.
ಹಿರಿಯ ಸಾಹಿತಿ ರೂಪಾ ಹಾಸನ್ ಅವರು ಮಾತನಾಡಿ, ಹೆಣ್ಣು ಮಕ್ಕಳು ಅನುಕಂಪ ಕಾರುಣ್ಯ ಉಳ್ಳವರು. ಮಹಿಳೆಯರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಸ್ವ- ಸಹಾಯ ಗುಂಪುಗಳು ಹೆಚ್ಚು ಸಹಕಾರಿಯಾಗಿವೆ. ಸ್ವ- ಸಹಾಯ ಗುಂಪುಗಳ ಉತ್ತೇಜನಕ್ಕೆ ಯಾವುದೇ ಹಸ್ತಕ್ಷೇಪವಿಲ್ಲದೆಯೇ ಬ್ಯಾಂಕುಗಳು ಹಣವನ್ನು ಒದಗಿಸುತ್ತವೆ. ಬಡ ಕುಟುಂಬದ ಮಹಿಳೆಯರಿಗೆ ಮೈಕ್ರೋ ಫೈನಾನ್ಸಿಂಗ್‌ನಂತಹ ಸಹಾಯ ಸಿಗುತ್ತದೆ. ಇವುಗಳ ಸಹಾಯದಿಂದ ಮಹಿಳೆಯರು ಆರ್ಥಿಕ ಸದೃಢತೆ ಸಾಧಿಸಬೇಕು. ಮಹಿಳೆಯರು ಯಾವ ಸಮಸ್ಯೆಗಳಿಗೆ ಒಳಗಾಗದಂತೆ ಅವುಗಳನ್ನು ಸರಿದೂಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಸಾಹಿತಿ ಭಾನು ಮುಷ್ತಾಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾಜಾಸುಲೋಚನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಸಿಂಹ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿಗಳಾದ ಸಜಿಯಾ, ಖಜಾನೆ ಇಲಾಖೆಯ ಉಪನಿರ್ದೇಶಕರಾದ ಕವಿತಾ, ಜಿಲ್ಲಾ ವಿಶೇಷ ವಿಕಲಚೇತನ ಅಧಿಕಾರಿ ಅನುಪಮಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ, ಆಶಾ ಕಾರ್ಯಕರ್ತೆಯರು, ಮತ್ತಿತರರು ಉಪಸ್ಥಿತರಿದ್ದರು.