ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ಸಂಪೂರ್ಣ ವ್ಯಕ್ತವಾಗಿಲ್ಲ

Post
Published on

ಚಿತ್ರದುರ್ಗ: ಕೇವಲ ರಾಜಕೀಯ ಸಮಾನತೆ ಇದ್ದರೆ ಸಾಲದು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿಯೂ ಇರಬೇಕು. ಆದರೆ, ಎಲ್ಲ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ವ್ಯಕ್ತವಾಗಿಲ್ಲ ಎಂದು ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ತಿಳಿಸಿದರು.

ಅಖಿಲ ಭಾರತ ಅಂಚೆ ನೌಕರರ ಎಸ್ಸಿ-ಎಸ್ಟಿ ಕ್ಷೇಮಾಭಿವೃದ್ಧಿ ಸಂಘದಿಂದ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಕಾರಿಣಿ ಸಮಿತಿ ಸಭೆ, ಜಿಲ್ಲಾಮಟ್ಟದ ತೃತೀಯ ಸಮ್ಮೇಳನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಸಮಾಜದಲ್ಲಿ ಸಮಾನತೆ ಬರುವವರೆಗೂ ಮೀಸಲಾತಿ ಇರಬೇಕು. ಅದು ಮೂಲಭೂತ ಹಕ್ಕು, ಅಸ್ಥಿತ್ವ ಹಾಗೂ ಅವಕಾಶವೂ ಹೌದು ಎಂದರು.

ಸಂಪೂರ್ಣ ಸಮಾನತೆ ವಿದೇಶಗಳಲ್ಲಿ ಇದೆ ಎಂದಲ್ಲ. ಅಲ್ಲಿಯೂ ಅಸಮಾನತೆ ಇದೆ. ಆದರೆ, ಭಾರತದಲ್ಲಿ ಪ್ರಮಾಣ ಹೆಚ್ಚಿದೆ. ಅಸ್ಪಶ್ಯತೆ ಕಡಿಮೆಯಾಗಿದ್ದರೂ ಜಾತಿ ವ್ಯವಸ್ಥೆ ಸಂಪೂರ್ಣ ಹೋಗಿಲ್ಲ. ಅಂತರ್ಜಾತಿ ವಿವಾಹ ಬಹಿಷ್ಕರಿಸುವ ಅನೇಕ ಪ್ರಕರಣಗಳೇ ಇದಕ್ಕೆ ನಿದರ್ಶನ. ಇದನ್ನು ಹೋಗಲಾಡಿಸಬೇಕಿದೆ ಎಂದು ಸಲಹೆ ನೀಡಿದರು.

ಧರ್ಮದಲ್ಲಿ ಭಕ್ತಿ ಇದೆ. ಅದನ್ನು ರಾಜಕೀಯದಲ್ಲಿ ತರಬೇಡಿ ಎಂದು ಅಂಬೇಡ್ಕರ್ ತಿಳಿಸಿದ್ದರು. ಇದನ್ನು ನಾವೆಲ್ಲ ಸರಿಯಾಗಿ ಅರ್ಥೈಸಿಕೊಂಡು ನಡೆಯಬೇಕಿದೆ. ಮೌಢ್ಯಕ್ಕೆ ಒಳಗಾಗಿ ಸಮಾಜದ ಈಗಿನ ಬೆಳವಣಿಗೆಗೆ ಅಡ್ಡಿಯಾಗಬಾರದು. ಆದರ್ಶದಿಂದ ನಡೆದು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಸಲಹೆ ನೀಡಿದರು.

ಸಂವಿಧಾನ ಕರಡು ಸಮಿತಿಯಲ್ಲಿ ದಲಿತ ಮಹಿಳೆ ಸೇರಿ 15 ಸ್ತ್ರೀಯರಿದ್ದರು ಎಂಬುದೇ ಗಮನಾರ್ಹ ಸಂಗತಿ. ಅವರೆಲ್ಲರ ಭಾವಚಿತ್ರದ ಅಂಚೆ ಚೀಟಿಯನ್ನು ಈ ಬಾರಿಯ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹೊರತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಂಘದ ಕರ್ನಾಟಕ ವೃತ್ತ ಅಧ್ಯಕ್ಷ ಆರ್.ಶ್ರೀನಿವಾಸ್, ಖಜಾಂಚಿ ಆರ್.ನವೀನ್‌ಕುಮಾರ್, ವಲಯ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ವಿವಿಧ ವಿಭಾಗದ ಅಧೀಕ್ಷಕರಾದ ಜಿ.ಹರೀಶ್, ವಿ.ಎಲ್.ಚಿತ್ತಕೋಟಿ, ಕೆ.ಎಂ.ನರೇಂದ್ರನಾಯಕ್, ಚಂದ್ರಶೇಖರ್, ಸಹಾಯಕ ಅಂಚೆ ಅಧೀಕ್ಷಕ ಜಿ.ಬಸವರಾಜ, ಚಿತ್ರದುರ್ಗ ವಿಭಾಗದ ಅಧ್ಯಕ್ಷ ಪಿ.ಎಚ್.ರೇವಪ್ಪ, ಗೌರವಾಧ್ಯಕ್ಷ ಆರ್.ಮಾರುತಿ, ಕಾರ್ಯದರ್ಶಿ ಎಸ್.ಮಂಜಣ್ಣ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಆರ್.ಕರಿಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net