ಎಲ್ಲ ಕಾಯಿಲೆಗೂ ಯೋಗ ಒಂದೇ ಮದ್ದು:ಸಂಸದ ಶ್ರೇಯಸ್ ಎಂ. ಪಟೇಲ್ ಅ

ಎಲ್ಲ ಕಾಯಿಲೆಗೂ ಯೋಗ ಒಂದೇ ಮದ್ದು:ಸಂಸದ ಶ್ರೇಯಸ್ ಎಂ. ಪಟೇಲ್ ಅ
Published on

ಹಾಸನ: ಪ್ರಸ್ತುತ ದಿನಗಳಲ್ಲಿ ಎಲ್ಲ ವೈದ್ಯರು ಜನರಿಗೆ ನೀಡುವ ಸಲಹೆ ಏನೆಂದರೆ ಅದು ಯೋಗ. ಎಲ್ಲಾ ಕಾಯಿಲೆಗಳಿಗೂ ಯೋಗ ಒಂದೇ ಮದ್ದಾಗಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಹಾಕಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವಜನ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಯೋಗ ದಿನದಂದು ಮಾತ್ರ ಯೋಗ ಮಾಡದೆ ಪ್ರತಿದಿನದ ಚಟುವಟಿಕೆಯಾಗಿ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥೃ ಉತ್ತಮವಾಗಿರಲಿದೆ ಎಂದು ಕಿವಿಮಾತು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ 25 ವರ್ಷಕ್ಕೆ ಡಯಾಬೀಟಿಸ್, ಹೃದಯಾಘಾತ ಸಂಭವಿಸುತ್ತಿದೆ. ಯಾವ ವೈದ್ಯರ ಬಳಿ ಹೋದರೂ ಪ್ರತಿ ದಿನ ಕೆಲ ಸಮಯ ಯೋಗ ಮಾಡಿ ಎಂದೇ ಸಲಹೆ ನೀಡುತ್ತಾರೆ. ನಾನು ಕೂಡ ಮಂದಿನ ದಿನಗಳಲ್ಲಿ ದಿನನಿತ್ಯ ಯೋಗ ಮಾಡುವುದನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದರು.
ಹಾಸನ ನಗರವನ್ನು ಸ್ವಚ್ಛ ನಗರ ಹಾಗೂ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಡಲು ಗಿಡ, ಮರಗಳನ್ನು ಬೆಳೆಸಬೇಕು. ಸ್ವಚ್ಛತೆಯಲ್ಲಿ ಹಾಸನ ನಗರವನ್ನು ಪ್ರಥಮ ಸ್ಥಾನಕ್ಕೆ ಕೊಂಡೂಯ್ಯಲು ಎಲ್ಲರೂ ಒಟ್ಟಿಗೆ ಶ್ರಮಿಸೋಣ. ನಾನು ಸಂಸದನಾಗಿ 15 ದಿನಗಳಾಗಿದ್ದು, ನಿಮ್ಮ ಆಶೀರ್ವಾದದಿಂದಲೇ ಸಂಸದನಾಗಿದ್ದೇನೆ. ನಿಮ್ಮ ಸಲಹೆ, ಸಹಕಾರ ನನ್ನ ಮೇಲೆ ಇರಲಿ ಎಂದು ಹೇಳಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಹಾಸನದಲ್ಲಿ ಇರುವ ಉದ್ಯಾನವನದಲ್ಲಿ ಯೋಗ ಪ್ರಿಯರು ಯೋಗಾಭ್ಯಾಸ ಮಾಡುತ್ತಾರೆ. ಅದೇ ರೀತಿ ಶಾಲಾ-ಕಾಲೇಜುಗಳಲ್ಲಿ ವಾರಕ್ಕೊಮ್ಮೆ ಎರಡು ಬಾರಿಯಾದರೂ ಯೋಗಾಭ್ಯಾಸ ಮಾಡುವುದರ ಜತೆಗೆ ಯೋಗದ ಬಗ್ಗೆ ಪಠ್ಯದಲ್ಲೂ ಸೇರಿಸಬೇಕು. ಯೋಗ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ, ದೈಹಿಕವಾಗಿ ಸದೃಢತೆ ಜತೆಗೆ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಮಾತನಾಡಿ, ನಾನು ಕೂಡ ಮೊದಲು ಯೋಗವನ್ನು ಮಾಡುತ್ತಿದ್ದೆ. ಆದರೆ ಈಗ ಕೆಲಸದ ಒತ್ತಡದಲ್ಲಿ ಯೋಗ ಮಾಡಲು ಸಾಧ್ಯವಾಗುತ್ತಿಲ್ಲ. ಯೋಗದಿಂದ ಹೊರಗೆ ಉಳಿದರೆ ನೀರಿನಿಂದ ಮೀನನ್ನು ಹೊರಗೆ ತೆಗೆದು ಹಾಕಿದಂತೆ. ಯೋಗವನ್ನು ಹೆಣ್ಣು ಮಕ್ಕಳು ಹೆಚ್ಚು ಅಳವಡಿಸಿಕೊಳ್ಳುತಿದ್ದಾರೆ. ಎಲ್ಲರೂ ಸಹ ಸಹ ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ಇದರಿಂದ ದೇಹದ ಪ್ರತಿ ಅಂಗಾಂಗಗಳಿಗೆ ಚೈತನ್ಯ ಬರುತ್ತದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಆರ್. ಪೂರ್ಣಿಮಾ ಮಾತನಾಡಿ, ವಿಶ್ವದಲ್ಲಿ ಯೋಗದ ಮಹತ್ವವನ್ನು ತಿಳಿಸಿಕೊಟ್ಟಿದ್ದೇವೆ. ಈ ಯೋಗವು ವರ್ಷಕ್ಕೆ ಒಂದು ಬಾರಿ ಮಾತ್ರ ಸೀಮಿತವಾಗದೇ ದಿನನಿತ್ಯದ ಜೀವನದ ಭಾಗವಾಗಿ ಯೋಗವನ್ನು ಮುಂದುವರೆಸುವುದರಿಂದ ನಮ್ಮ ಶರೀರ ಹಾಗೂ ಮಾನಸಿಕ ಸ್ವಾಸ್ಥೃವನ್ನು ಕಾಪಾಡಿಕೊಳ್ಳುವುದಕ್ಕೆ ಬಹಳ ಅನುಕೂಲವಾಗಿದೆ ಎಂದರು.
ಡಾ. ಗುರು ಬಸವರಾಜು ಅವರು ಯೋಗದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಯೋಗ ಎಂಬುದು ಮನೆಯಿಂದಲೇ ಬಂದರೆ ಉತ್ತಮ. ಮನೆಯಲ್ಲಿ ಪೋಷಕರು ಯಾವ ರೀತಿ ಇರುತ್ತಾರೆ ಅದನ್ನೇ ಮಕ್ಕಳು ಕೂಡ ಅನುಸರಿಸುತ್ತಾರೆ. ಮಕ್ಕಳ ಮುಂದೆ ಪೋಷಕರು ಯೋಗ ಮಾಡಿದರೇ ಮಕ್ಕಳು ಕೂಡ ಅದನ್ನು ರೂಢಿಸಿಕೊಳ್ಳುತ್ತಾರೆ. ಯೋಗವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ, ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ತಹಸೀಲ್ದಾರ್ ಶ್ವೇತ ಎನ್. ರವೀಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೂಸೆಬ್ಯಾರಿ, ಸಂಚಾಲಕ ಬಿ.ಎಂ. ಲಕ್ಷ್ಮೀಕಾಂತ್, ಡಾ.ಜಿ.ಎಸ್. ರವೀಂದ್ರ, ಶ್ರೀ ಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಮಹಾವಿದ್ಯಾಲಯದ ನರಸಿಂಹ ಎನ್. ರಾವ್, ಶೈಲಜಾ, ಪತಂಜಲಿ ಯೋಗಾ ಪರಿವಾರದ ಶೇಷಪ್ಪ, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net