ಎಲ್ಲ ಕಾನೂನುಗಳ ತಾಯಿ ಸಂವಿಧಾನ

kanunu arivu
Published on

ಬೀದರ್: ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಮೂಲಕ ಎಲ್ಲ ಕಾನೂನುಗಳಿಗೆ ಇದು ತಾಯಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಪಿ. ಸಿದ್ರಾಮ ಹೇಳಿದರು.

ನಗರದ ಲಾಡಗೇರಿ ಹಿರೇಮಠದಲ್ಲಿ ರಾಷ್ಟ್ರೀಯ ಯುವ ಸಪ್ತಾಹ ನಿಮಿತ್ತ ಮಂಗಳವಾರ ನಡೆದ ಕಾನೂನು ಅರಿವು ಹಾಗೂ ಯುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಅರಿಯಬೇಕು. ಎಲ್ಲರೂ ಸಂವಿಧಾನವನ್ನು ಓದಬೇಕು. ಬಲಿಷ್ಠ ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಹಿರಿದಾಗಿದೆ. ಭಾರತದ ಭವಿಷ್ಯ ಯುವಕರನ್ನೇ ಅವಲಂಬಿಸಿದೆ. ಸ್ವಾಮಿ ವಿವೇಕಾನಂದರ ಚಿಂತನೆ, ಸಂದೇಶ ಹಾಗೂ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಸ್ವಾಮಿ ವಿವೇಕಾನಂದರು ವಿಶ್ವದ ಅತ್ಯಂತ ಪ್ರಭಾವಿ ಅಧ್ಯಾತ್ಮ ಚಿಂತಕರು. ತಮ್ಮ ವಿದ್ಯುತ್ ವಾಣಿಗಳಿಂದ ಜನರ ಧಾರ್ಮಿಕತೆ ಬಡಿದೆಬ್ಬಿಸಿದರು ಎಂದರು.

ಲಾಡಗೇರಿ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯ ಸಾನ್ನಿಧ್ಯ, ಶಿವಯ್ಯಾ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನವೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ, ಕಾರ್ಯಕ್ರಮ ಸಂಯೋಜಕ ಸಂಜೀವಕುಮಾರ ಸ್ವಾಮಿ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಮಯೂರಕುಮಾರ ಗೋರ್ಮೆ, ಅರವಿಂದ ಕುಲಕರ್ಣಿ, ಸುನೀಲ ಭಾವಿಕಟ್ಟಿ, ಶಂಕ್ರೆಪ್ಪ ಜನಕಟ್ಟಿ, ಸುಭಾಷ ಬಿರಾದಾರ, ಶ್ರೀಕಾಂತ ಸ್ವಾಮಿ, ಓಂಕಾರ ಉಪ್ಪೆ, ಪ್ರದೀಪ ಶೆಟಕಾರ, ಬಂಡೆಪ್ಪ ಗಿರಿ, ಮಲ್ಲಿಕಾರ್ಜುನ ಬಸಂತಪುರೆ, ಕಾಶಿನಾಥ ಗಿರಿ ಇದ್ದರು. ಈ ವೇಳೆ ಕರೊನಾ ವಾರಿಯರ್ ಡಾ.ಚಂದ್ರಕಾಂತ ಚಿಲ್ಲರ್ಗಿ ಹಾಗೂ ಡಾ. ಶಿವಾನಂದ ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಜಾಗೃತಿ ವೇದಿಕೆ, ನ್ಯೂ ಮದರ್ ತೆರೆಸಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಜಗದ್ಗುರು ಪಂಚಾಚಾರ್ಯ ಯುವಕ ಸಂಘ ಹಾಗೂ ನವೀನ್ ಶಿಕ್ಷಣ ಸಂಸ್ಥೆಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net