ಎಲ್ಲ ಔಷಧಕ್ಕೂ ಆಯುರ್ವೆದವೇ ಮೂಲ

27 smg 4
Published on

ಶಿವಮೊಗ್ಗ: ಎಲ್ಲ ಔಷಧಗಳ ಮೂಲವೇ ಆಯುರ್ವೆದವಾಗಿದ್ದು ಅದಕ್ಕೆ ಸರಿಸಾಟಿಯಾದ ಔಷಧ ಮತ್ತೊಂದಿಲ್ಲ ಎಂದು ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ವಿನಯಾನಂದ ಗುರೂಜಿ ಹೇಳಿದರು.

ಬಸವಕೇಂದ್ರದಲ್ಲಿ ಟಿಎಂಎಇಎಸ್ ಆಯುರ್ವೆದ ಕಾಲೇಜು ಮತ್ತು ಆಸ್ಪತ್ರೆಯಿಂದ ಸೋಮವಾರ ಆಯುರ್ವೆದ ಕಿಟ್ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಆರೋಗ್ಯಯುತ ಬದುಕು ರೂಪಿಸಿಕೊಳ್ಳಲು ಆಯುರ್ವೆದ ಸಹಕಾರಿ ಎಂದರು.

ಆಯುರ್ವೆದ ಭಾರತೀಯ ಶ್ರೇಷ್ಠ ಪರಂಪರೆಯ ಕೊಡುಗೆ. ಭಾರತೀಯ ಪರಂಪರೆಯ ಆಯುರ್ವೆದದ ಬಗ್ಗೆ ಜನ ಅರಿತುಕೊಳ್ಳಲು ಸೂಕ್ತ ಜ್ಞಾನದ ಕೊರತೆ ಇದೆ. ಭಾರತೀಯ ಶ್ರೇಷ್ಠ ಇತಿಹಾಸ, ಜ್ಞಾನ ಪರಂಪರೆ, ಆಯುರ್ವೆದ ಕುರಿತು ಎಲ್ಲರಿಗೂ ಸೂಕ್ತ ತಿಳಿವಳಿಕೆ ಮೂಡಿಸುವುದು ಅವಶ್ಯ ಎಂದು ಹೇಳಿದರು.

ಆಧುನಿಕ ಯುಗದಲ್ಲಿ ಬದಲಾದ ಆಹಾರ ಪದ್ಧತಿಗಳೇ ಹಲವು ರೋಗಗಳಿಗೆ ಕಾರಣ. ಆಯುರ್ವೆದ ಪದ್ಧತಿಯಲ್ಲಿ ಎಲ್ಲ ರೀತಿಯ ಕಾಯಿಲೆಗಳಿಗೂ ಔಷಧ ಲಭ್ಯವಿದೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಆಯುರ್ವೆದ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿದುಕೊಂಡು ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು.

ಶರೀರ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಮನುಷ್ಯನಲ್ಲಿ ರೋಗ ನಿರೋಧಕ ಅವಶ್ಯಕ. ವಿಜ್ಞಾನದಲ್ಲಿ ಏನೇ ಔಷಧಗಳನ್ನು ಕಂಡುಹಿಡಿದಿದ್ದರೂ ಅವೆಲ್ಲಕ್ಕೂ ಒಂದಲ್ಲ ಒಂದು ರೀತಿ ಆಯುರ್ವೆದವೇ ಮೂಲ ಜ್ಞಾನ. ಆಯುರ್ವೆದವೇ ಎಲ್ಲದಕ್ಕೂ ಆಧಾರ ಎಂದು ಅಭಿಪ್ರಾಯಟ್ಟರು.

ಆಸ್ಪತ್ರೆ ಆಡಳಿತಾಧಿಕಾರಿ ಜಿ.ಎ.ಹಿರೇಮಠ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕರೊನಾ ಎಲ್ಲೆಡೆ ವ್ಯಾಪಿಸಿದೆ. ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿಯು ಕಡಿಮೆ ಆಗಿರುವುದು ಕರೊನಾ ಸೋಂಕು ತಗುಲುವುದಕ್ಕೆ ಕಾರಣವಾಗಿದೆ. ಆದ್ದರಿಂದ ಕಾಲೇಜಿನಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧದ ಕಿಟ್ ಸಿದ್ಧಪಡಿಸಲಾಗಿದೆ ಎಂದರು.

ಆಯುರ್ವೆದ ಕಿಟ್ ಬಿಡುಗಡೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೆದಿಕ್ ಕಿಟ್ ಬಿಡುಗಡೆಗೊಳಿಸಿದರು. ಹರಿದ್ರಾ ಕಾಂಡ (ಪ್ರತಿದಿನ ಹಾಲಿನೊಂದಿಗೆ ಎರಡು ಬಾರಿ ಸಣ್ಣವರಿಗೆ 5 ಗ್ರಾಂ, ವಯಸ್ಕರಿಗೆ 10 ಗ್ರಾಂ), ಸ್ವಸ್ಥ ಕಷಾಯ ಚೂರ್ಣ(ಬೆಳಗ್ಗೆ-ರಾತ್ರಿ ಟೀ ಮಾದರಿ ಕಾಯಿಸಿ ಸೇವನೆ) ಹಾಗೂ ಗಿಲಾಯ್ ಘನವಟಿ(ಮಾತ್ರೆಗಳು) ಎಂಬ ಮೂರು ವಿಧದ ಔಷಧಗಳು ಕಿಟ್​ನಲ್ಲಿವೆ.

ಎಂಎಲ್​ಸಿ ಎಸ್.ರುದ್ರೇಗೌಡ, ಆಸ್ಪತ್ರೆಯ ಉಪ ಪ್ರಾಚಾರ್ಯ ಡಾ. ಟಿ.ಸಿ.ವಿನಯ್, ಸಂತೋಷ್​ಕುಮಾರ್, ಮಾಜಿ ಮೇಯರ್ ಲತಾ ಗಣೇಶ್, ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಡಾ. ಕೇಶವದತ್ತ, ಡಾ. ರಂಜಿನಿ, ಡಾ. ನಳಿನಿ, ಯಶೋದಾ ಇದ್ದರು.

ಎಲ್ಲ ಜ್ಞಾನಗಳು ಆಯುರ್ವೆದದಲ್ಲಿವೆ. ಅದನ್ನು ಅನುಸರಿಸಲು ಶ್ರದ್ಧೆ, ಭಕ್ತಿ, ನಿಷ್ಠೆ, ವ್ಯವಧಾನ ಬೇಕು. ಆಯುರ್ವೆದದಲ್ಲಿರುವಷ್ಟು ವಿಶೇಷತೆ ಅಲೋಪತಿಯಲ್ಲಿಲ್ಲ. ಆಯುರ್ವೆದವು ದೇಹದಲ್ಲಿರುವ ವಿಷ ಹೊರಹಾಕಿ ಅಮೃತವನ್ನು ತುಂಬುತ್ತದೆ. ಆಯುರ್ವೆದ ಮತ್ತು ಅಲೋಪತಿ ಒಟ್ಟಾಗಿ ಹೋದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ.

| ಶ್ರೀ ಸ್ವಾಮಿ ವಿನಯಾನಂದ ಗುರೂಜಿ, ಕಲ್ಲಗಂಗೂರಿನ ಶ್ರೀ ರಾಮಕೃಷ್ಣ ಆಶ್ರಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net