

ಚಿಟಗುಪ್ಪ: ತಾಲೂಕಿನ ಜನರ ಬೇಡಿಯಂತೆ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಅಗತ್ಯವಿರುವ ಇತರ ಕಚೇರಿ ಕಟ್ಟಡ ನಿರ್ಮಾಣಕ್ಕೂ ಹಂತ-ಹಂತವಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಕಂದಾಯ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಡಿ ೮.೬೦ ಕೋಟಿ ವೆಚ್ಚದ ಪ್ರಜಾಸೌಧ-ಆಡಳಿತ ಸೌಧ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಅವರು, ಜಗದೀಶ ಶೆಟ್ಟರ್ ಸಿಎಂ ಇದ್ದಾಗ ತಾಲೂಕು ಕೇಂದ್ರವಾಗಿ ಘೋಷಿಸಿದ ಚಿಟಗುಪ್ಪ ಅಭಿವೃದ್ಧಿ ಬಗ್ಗೆ ಅಧಿವೇಶನದಲ್ಲೂ ಗಮನ ಸೆಳೆದಿರುವೆ. ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರಜಾಸೌಧ ಮಂಜೂರು ಮಾಡಿಸಿರುವುದಾಗಿ ತಿಳಿಸಿದರು.
ಮುಂಬರುವ ದಿನಗಳಲ್ಲಿ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೂ ಸಂಬಂಧಿತ ಸಚಿವರ ಗಮನಕ್ಕೆ ತಂದು ಪ್ರಯತ್ನಿಸುವೆ. ಪಟ್ಟಣದಲ್ಲಿ ಕ್ರೀಡಾಂಗಣಕ್ಕಾಗಿ ಸ್ಥಳ ಪರಿಶೀಲಿಸುವಂತೆ ತಹಸೀಲ್ದಾರ್‌ಗೆ ತಿಳಿಸಿದ್ದು, ನಿರ್ಮಾಣಕ್ಕಾಗಿ ಅಗತ್ಯವಿರುವ ಐದು ಎಕರೆ ಭೂಮಿಯಲ್ಲಿ ಮೂರು ಎಕರೆ ಮಂಜೂರಾಗಿದ್ದು, ಉಳಿದ ಎರಡು ಎಕರೆಗಾಗಿ ಹುಡುಕಾಟ ನಡೆದಿದೆ ಎಂದರು.
ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಚಿಟಗುಪ್ಪ ಹೊಸ ತಾಲೂಕು ಘೋಷಿಸಿರುವ ಅಂದಿನ ಸಿಎಂ ಜಗದೀಶ ಶೆಟ್ಟರ್ ಅವರನ್ನು ನಾವು ಮರೆಯುವಂತಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ತಾಲೂಕು ಮಟ್ಟದ ಎಲ್ಲ ಇಲಾಖೆ ಕಚೇರಿಗಳನ್ನು ಶೀಘ್ರ ಆರಂಭಿಸಬೇಕಿದೆ. ಇನ್ನು ಪ್ರಜಾಸೌಧ ಜತೆಗೆ ಎರಡು ಎಕರೆ ಭೂಮಿಯಲ್ಲಿ ತಾಪಂ ಕಟ್ಟಡ ಕೂಡ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ನನ್ನದು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಹೊಸ ತಾಲೂಕುಗಳಲ್ಲಿ ಹೊಸ ಪ್ರಜಾಸೌಧ ನಿರ್ಮಿಸಬೇಕೆಂಬ ಸಿಎಂ ಸಿದ್ದರಾಮಯ್ಯ ಸಂಕಲ್ಪದಂತೆ ಕಂದಾಯ ಇಲಾಖೆ, ಕೆಕೆಆರಡಿಬಿ ಅನುದಾನದಡಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ೧೧ ತಿಂಗಳಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ಮುಗಿಸಬೇಕು ಎಂದು ಸಂಬಂಧಿತರಿಗೆ ತಾಕೀತು ಮಾಡಿದರು.
ಪುರಸಭೆ ಅಧ್ಯಕ್ಷ ದಿಲೀಪಕುಮಾರ ಬಗದಲಕರ್, ಉಪಾಧ್ಯಕ್ಷ ನಾಸೀರ್ ಖಾನ್, ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಇಒ ಲಕ್ಷ್ಮೀ ಬಿರಾದಾರ, ಪುರಸಭೆ ಸಿಒ ಹುಸಾಮೊದ್ದೀನ್ ಬಾಬಾ, ಸಿಪಿಐ ಶ್ರೀನಿವಾಸ ಅಲ್ಲಾಪುರ, ಪಿಎಸ್‌ಐಗಳಾದ ಬಾಶುಮಿಯಾ, ಮಹೇಂದ್ರ ಇತರರಿದ್ದರು.
ನೂತನ ಚಿಟಗುಪ್ಪ ತಾಲೂಕು ಮಾದರಿಯಾಗಿಸಲು ಎಲ್ಲರೂ ಸೇರಿ ಶ್ರಮಿಸಬೇಕಿದೆ. ಇಲ್ಲಿ ಎಲ್ಲ ಇಲಾಖೆ ಕಚೇರಿಗಳಿಗೆ ಕಟ್ಟಡ ಸೇರಿ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.
| ಡಾ.ಸಿದ್ದಲಿಂಗಪ್ಪ ಪಾಟೀಲ್
ಶಾಸಕ
ಚಿಟಗುಪ್ಪ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಚಿಟಗುಪ್ಪ ಪಟ್ಟಣದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದ್ದಾರೆ. ಈ ಹಿಂದಿನ ಸರ್ಕಾರದ ಸಿಎಂ ಜಗದೀಶ ಶೆಟ್ಟರ್ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಅನುದಾನ ನೀಡುವಂತೆ ಅನೇಕ ಸಲ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ಪ್ರಕಟಣೆಯಲ್ಲಿ ಬೇಸರ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನಮ್ಮ ಮನವಿಗೆ ಸ್ಪಂದಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಿಟಗುಪ್ಪದಲ್ಲಿ ಪ್ರಜಾಸೌಭ ನಿರ್ಮಾಣಕ್ಕೆ ೮.೬೦ ಕೋಟಿ ಅನುದಾನ ಮಂಜೂರು ಮಾಡಿದ್ದು, ಈ ಭಾಗದ ಜನರ ಪರವಾಗಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.