

ಗದಗ: ದೆಹಲಿಯಲ್ಲಿ ತಬ್ಲಿಘಿ ಸಂಘಟನೆ ವತಿಯಿಂದ ಆಯೋಜಿಸಿದ್ದ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲೆಯ 13 ಜನರ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದು, ಇದರೊಂದಿಗೆ ಮುದ್ರಣ ಕಾಶಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಗದಗ ನಗರದ 10 ಮತ್ತು ನರಗುಂದ ತಾಲೂಕಿನ ಮೂವರು ಸೇರಿ ಒಟ್ಟು 13 ಜನರು ದೆಹಲಿಯ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದರು. ಈ ವಿಷಯ ಮಂಗಳವಾರ ಮತ್ತು ಬುಧವಾರ ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಮೇಲೆ ಜಿಲ್ಲಾಡಳಿತ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿತ್ತು. ಅಲ್ಲದೇ ಅವರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳಿಸಿತ್ತು. ಮೊದಲು ಕಳಿಸಿದ್ದ 9 ಜನರ ವೈದ್ಯಕೀಯ ವರದಿ ಗುರುವಾರ ನೆಗೆಟಿವ್ ಬಂದಿತ್ತು. ಶುಕ್ರವಾರ ಉಳಿದ ನಾಲ್ಕು ಜನರ ವರದಿ ಸಹ ನೆಗೆಟಿವ್ ಬಂದಿದ್ದರಿಂದ ಜಿಲ್ಲೆಯ ಜನರು ನಿರಾಳರಾಗಿದ್ದಾರೆ.
189 ಜನರು ನಿಗಾದಲ್ಲಿ
ಗದಗ: ಜಿಲ್ಲೆಯ ಕರೊನಾ ಪಿಡುಗು ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶುಕ್ರವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇದುವರೆಗೆ ಜಿಲ್ಲೆಯಲ್ಲಿ 219 ಜನರು ನಿಗಾಕ್ಕೆ ಒಳಗಾಗಿದ್ದಾರೆ. 30 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 183 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. 6 ಜನರು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಲಾಗಿದೆ.
ಒಟ್ಟು 76 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಇದರಲ್ಲಿ 62 ವರದಿಗಳು ನೆಗೆಟಿವ್ ಬಂದಿದ್ದು, ಉಳಿದ 14 ಪ್ರಕರಣಗಳ ವೈದ್ಯಕೀಯ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಅನಗತ್ಯವಾಗಿ ಸಂಚರಿಸಿದ 16 ಬೈಕ್ ವಶಕ್ಕೆ
ಮುಂಡರಗಿ: ಪಟ್ಟಣದಲ್ಲಿ ಅನಗತ್ಯವಾಗಿ ಬೈಕ್ನಲ್ಲಿ ತಿರುಗಾಡುತ್ತಿದ್ದ ಸವಾರರಿಗೆ ಪೊಲೀಸರು ಲಾಕ್ಡೌನ್ ಕುರಿತು ತಿಳಿವಳಿಕೆ ನೀಡಿ ಅವರಿಂದ 16 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅಗತ್ಯ ದಿನಸಿ ಸಾಮಗ್ರಿ ಖರೀದಿಸಲು ಬೆಳಗ್ಗೆ 6ರಿಂದ ಬೆಳಗ್ಗೆ 9 ಗಂಟೆಯವರೆಗೆ ನಿಗದಿಪಡಿಸಲಾಗಿರುವ ಸಮಯ ಹೊರತುಪಡಿಸಿ ಅನಗತ್ಯವಾಗಿ ಹೊರಗಡೆ ಬರಬಾರದು. ಒಂದು ವೇಳೆ ಬಂದರೆ ತಮ್ಮ ವಾಹನಗಳನ್ನು ಸೀಜ್ ಮಾಡಬೇಕಾಗುತ್ತದೆ ಎಂದು ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಡಿದ ಸುಮಾರು 16 ಬೈಕ್ಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲಾಕ್ಡೌನ್ ಪೂರ್ಣಗೊಳ್ಳುವವರೆಗೂ ಬೈಕ್ ಕೊಡುವುದಿಲ್ಲ ಎಂದು ಬೈಕ್ಗಳನ್ನು ಪೊಲೀಸ್ ಠಾಣೆ ಆವರಣದಲ್ಲಿ ಇರಿಸಿದ್ದಾರೆ.
ಲಾಕ್ಡೌನ್ ಇರುವುದರಿಂದ ಅನಗತ್ಯವಾಗಿ ಯಾರೂ ಹೊರಗಡೆ ತಿರುಗಾಡಬಾರದು. ಅಗತ್ಯ ಹಾಗೂ ತುರ್ತು ವಿಷಯಕ್ಕೆ ಮಾತ್ರ ವಾಹನ ಬಳಕೆ ಮಾಡಬೇಕು ಹೊರತು ಅನಗತ್ಯವಾಗಿ ತಿರುಗಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಪಿಐ ಸುಧೀರಕುಮಾರ ಬೆಂಕಿ ತಿಳಿಸಿದರು.
ಮನೆಯಲ್ಲಿರುವುದೇ ಮಹಾಮಾರಿಗೆ ಮದ್ದು
ಲಕ್ಷ್ಮೇಶ್ವರ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಯಾರೊಬ್ಬರೂ ಮನೆಯಿಂದ ಹೊರ ಹೋಗಬಾರದು. ಮನೆಯಲ್ಲಿರುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೇ ಕರೊನಾಕ್ಕೆ ಮದ್ದು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್. ಒಡೆಯರ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿಯಿಂದ ಪುರಸಭೆ, ವೈದ್ಯಕೀಯ ಮತ್ತು ಪೊಲೀಸ್ ಇಲಾಖೆ ಸಹಕಾರದಲ್ಲಿ ಕರೊನಾ ಜಾಗೃತಿ ಅಭಿಯಾನದಲ್ಲಿ ಪುರಸಭೆ ವಾಹನದ ಧ್ವನಿವರ್ಧಕದ ಮೂಲಕ ಜನರಿಗೆ ತಿಳಿವಳಿಕೆ ನೀಡಿದರು.
‘ಪ್ರತಿಯೊಬ್ಬರೂ ಸರ್ಕಾರ ವಿಧಿಸಿರುವ ನಿರ್ದೇಶನ, ಕಾನೂನು-ಕಟ್ಟಳೆಗಳನ್ನು ಚಾಚು ತಪ್ಪದೇ ಪಾಲಿಸಬೇಕು. ತೀರಾ ಅವಶ್ಯಕ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬಂದರೂ ಸಾಮಾಜಿಕ ಅಂತರ, ಸ್ವಚ್ಛತೆ, ಆರೋಗ್ಯ ಕ್ರಮಗಳನ್ನು ಪಾಲಿಸಬೇಕು’ ಎಂದರು.
ಕಿರಿಯ ದಿವಾಣಿ ನ್ಯಾಯಾಧೀಶ ಎನ್. ಪ್ರತಾಪ್ಕುಮಾರ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಸರ್ಕಾರಿ ಆಸ್ಪತ್ರೆಯ ಡಾ. ಗಿರೀಶ ಮರಟ್ಟಿ, ಪಿಎಸ್ಐ ಶಿವಯೋಗಿ ಲೋಹಾರ, ಆನಂದ ಬದಿ, ಮಂಜುನಾಥ ಮುದಗಲ್, ಇತರರಿದ್ದರು.
ಅಗತ್ಯ ದಿನಸಿ ಸಾಮಗ್ರಿ ವಿತರಣೆ
ಮುಂಡರಗಿ: ಸಂಸದ ತೇಜಸ್ವಿಸೂರ್ಯ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ನಗರದ 100 ಬಡಕುಟುಂಬಗಳಿಗೆ ಅಕ್ಕಿ, ಬೇಳೆ, ಒಳ್ಳೆಎಣ್ಣಿ, ಸೋಪು, ಮಾಸ್ಕ್, ಬಾಳೆಹಣ್ಣು ವಿತರಿಸಲಾಯಿತು.
ಸಂಸದ ತೇಜಸ್ವಿಸೂರ್ಯ ಅಭಿಮಾನಿ ಬಳಗದ ಅಧ್ಯಕ್ಷ, ಪುರಸಭೆ ಸದಸ್ಯ ಪವನ ಮೇಟಿ, ಪುರಸಭೆ ಸದಸ್ಯರಾದ ನಾಗೇಶ ಹುಬ್ಬಳ್ಳಿ, ಶಿವಪ್ಪ ಚಿಕ್ಕಣ್ಣವರ, ರಾಜಾಬಕ್ಷೀ ಬೆಟಗೇರಿ, ಸಂತೋಷ ಹಿರೇಮನಿ, ನಾಗರಾಜ ಕೊರ್ಲಹಳ್ಳಿ, ಬಳಗದ ಕಾರ್ಯಕರ್ತರಾದ ನಿಂಗರಾಜ ಹಾಲಿನವರ, ಧ್ರುವಕುಮಾರ ಹೂಗಾರ, ದೇವರಾಜ ಕವಲೂರ, ರಾಜು ಹಿರೇಮನಿ, ಮರಿಯಪ್ಪ ಅಳವಂಡಿ, ಸುರೇಶ ಮಾಯಮ್ಮನವರ, ವಿನೋದ ವಡ್ಡರ, ರಾಮು ನೀರಲಗಿ, ಮೈಲಾರಿ ಮಾಯಮ್ಮನವರ, ಕಂಠಪ್ಪ ಬಚನಹಳ್ಳಿ, ಹೊನ್ನಪ್ಪ ಬಚನಹಳ್ಳಿ ಇತರರಿದ್ದರು.
ಜಿಲ್ಲಾಧಿಕಾರಿ ಚೆಕ್ಪೋಸ್ಟ್ ಪರಿಶೀಲನೆ
ಗದಗ: ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ರಸ್ತೆ ಮೂಲಕ ಆಗಮಿಸುವ ಪ್ರಯಾಣಿಕರ ತಪಾಸಣೆ ಹಾಗೂ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಆರೋಗ್ಯ ಇಲಾಖೆ ಗಮನಕ್ಕೆ ತರಲು ಜಿಲ್ಲೆಯಲ್ಲಿ ತಾಲೂಕುವಾರು ಚೆಕ್ಪೋಸ್ಟ್ಗಳನ್ನು ನಿರ್ವಿುಸಲಾಗಿದೆ. ಗದಗ ತಾಲೂಕಿನ ದುಂದೂರು ಬಳಿ ನಿರ್ವಿುಸಿರುವ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಜಿಲ್ಲೆಯ ಜನಧನ್ ಖಾತೆ ಹೊಂದಿರುವ ಮಹಿಳೆಯರಿಗೆ ಮುಂದಿನ 3 ತಿಂಗಳವರೆಗೆ ತಲಾ 500 ರೂ. ಸಹಾಯಧನ ಜಮಾ ಮಾಡಲಾಗುತ್ತಿದೆ ಎಂದ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು ಹೀಗಾಗಿ ಏ. 5ರಂದು ಡಾ.ಬಾಬು ಜಗಜೀವನರಾಂ ಅವರ 113ನೇ ಜನ್ಮ ದಿನ ಹಾಗೂ ಏ. 14ರಂದು ಡಾ.ಬಿ.ಆರ್. ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯನ್ನು ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 9 ಗಂಟೆಗೆ ಸರಳವಾಗಿ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾಹುಸೇನ್ ಮುಧೋಳ ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ಮಾಸ್ಕ್ ವಿತರಣೆ
ಗದಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ವೈರಸ್ ಅನ್ನು ಬೇರುಮಟ್ಟದಲ್ಲಿ ತಡೆಯಬೇಕೆಂಬ ಇಚ್ಛಾಶಕ್ತಿ ಹೊಂದಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಚಿಂಚಲಿ ಹೇಳಿದರು.
ತಾಲೂಕಿನ ನಾಗಾವಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಸ್ಕ್ ವಿತರಣಾ ಕಾರ್ಯದಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ಡೌನ್ ಆದೇಶ ಹೊರಡಿಸಿದ್ದು, ಆಗಿನಿಂದಲೂ ಪಂಚಾಯತಿಯಿಂದ ಪ್ರತಿ ಮನೆಗೂ ಭೇಟಿ ನೀಡಿ ಕರೊನಾ ವೈರಸ್ ಕುರಿತು ಮಾಹಿತಿ ನೀಡಿ ಜನರನ್ನು ಜಾಗೃತಗೊಳಿಸಲಾಗಿದೆ ಎಂದರು.
ಗ್ರಾಮದ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲಾಗಿದ್ದು, ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಂ. ಬಚನಹಳ್ಳಿ ಮಾತನಾಡಿ, ಗ್ರಾಮದಲ್ಲಿ ಕರೊನಾ ವೈರಸ್ ಹರಡದಂತೆ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.
ಮಾಸ್ಕ್ ವಿತರಣಾ ಕಾರ್ಯದಲ್ಲಿ ಗ್ರಾಪಂ ಸದಸ್ಯರಾದ ಗಣೇಶ ಲಮಾಣಿ, ಸುರೇಶ ಚವ್ಹಾಣ, ಡಾಕಪ್ಪ ನಾಯಕ್, ಸಲೀಂಸಾಬ್ ನದಾಫ್ ಹಾಗೂ ಯಮನೂರುಸಾಬ್ ಹಡಗಲಿ, ಅಂಗನವಾಡಿ-ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
ಪೌರಕಾರ್ವಿುಕರಿಗೆ ಮುತ್ತಿನಹಾರ ಹಾಕಿ ಸನ್ಮಾನ
ಗದಗ: ಕರೊನಾ ವೈರಸ್ ಹರಡದಂತೆ ಲಾಕ್ಡೌನ್ ಘೊಷಣೆ ಹಿನ್ನ್ನೆಲೆಯಲ್ಲಿ ಅವಳಿನಗರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿರುವ ಪೌರ ಕಾರ್ವಿುಕರನ್ನು ಸಾರ್ವಜನಿಕರು ಶುಕ್ರವಾರ ಸನ್ಮಾನಿಸಿದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿ ಇದ್ದರೂ ಅವಳಿನಗರದ ಸ್ವಚ್ಛತೆಗಾಗಿ ಪೌರಕಾರ್ವಿುಕರು ಶ್ರಮಿಸುತ್ತಿದ್ದಾರೆ. ಹೀಗಾಗಿ ನಗರ ಸವೋದಯ ಕಾಲನಿಯ ನಿವಾಸಿಗಳು ಸನ್ಮಾನಿಸಿ ಗೌರವಿಸಿದರು. ಈ ಮೂಲಕ ಕರೊನಾ ತಡೆಗಟ್ಟಲು ನಿಯಂತ್ರಣ ಮಾಡಲು ಪೌರಕಾರ್ವಿುಕರು ವಿಶೇಷ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕಾರ ಕೊಡಬೇಕು ಎಂದು ನಿವಾಸಿಗಳು ಮನವಿ ಮಾಡಿದರು.