ಎಲ್‌ಐಸಿ ಯುವಜನರಿಗೆ ಬೃಹತ್ ಉದ್ಯೋಗದಾತ ಸಂಸ್ಥೆ

01-09-Shiva-12
ರಾಯಚೂರಿನ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಉದ್ಯೋಗವಕಾಶ ಕುರಿತು ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಎಲ್‌ಐಸಿ ಮಾರುಕಟ್ಟೆ ಪ್ರಬಂಧಕ ಎಚ್.ಸುಖೇಶ್ ಮಾತನಾಡಿದರು. ಎಲ್‌ಐಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ವೈ.ವೆಂಕಟೇಶ್ವರ ರಾವ್, ಕಾಲೇಜು ಪ್ರಾಚಾರ್ಯ ಅಮರೇಗೌಡ, ವೆಂಕಟೇಶ ದೊಡ್ಡಮನಿ ಇದ್ದರು.
Published on

ರಾಯಚೂರು: ಎಲ್‌ಐಸಿ ಜೀವ ವಿಮೆ ಮೂಲಕ ಜನರ ಜೀವನಕ್ಕೆ ಭದ್ರತೆ ಒದಗಿಸುತ್ತಿದ್ದು, ಜತೆಗೆ ಯುವ ಜನರಿಗೆ ಬೃಹತ್ ಉದ್ಯೋಗದಾತ ಸಂಸ್ಥೆಯಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ವೈ.ವೆಂಕಟೇಶ್ವರ ರಾವ್ ಹೇಳಿದರು.
ಸ್ಥಳೀಯ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಉದ್ಯೋಗವಕಾಶ ಕುರಿತು ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಂಸ್ಥೆ 42 ಲಕ್ಷ ಕೋಟಿ ರೂ. ವ್ಯವಹಾರ ನಡೆಸುತ್ತಿದ್ದು, 48 ಲಕ್ಷ ಕೋಟಿ ರೂ. ಆಸ್ತಿ ಹೊಂದಿದೆ ಎಂದರು.
ಮಾನವನ ಜೀವನದಲ್ಲಿ ಕಲಿಕೆ, ಗಳಿಕೆ ಮತ್ತು ಆನಂದ ಪ್ರಮುಖವಾಗಿದ್ದು, ವಿದ್ಯಾರ್ಥಿಗಳು ಕಲಿಕೆ ಜತೆಗೆ ಗಳಿಕೆಯ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್‌ಐಸಿಯಲ್ಲಿ ಏಜೆಂಟ್, ಅಭಿವೃದ್ಧಿ ಅಕಾರಿ, ಸಹಾಯಕ ಆಡಳಿತಾತ್ಮಕ ಅಕಾರಿ ಸೇರಿದಂತೆ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂದು ಹೇಳಿದರು.
ಎಲ್‌ಐಸಿ ಮಾರುಕಟ್ಟೆ ಪ್ರಬಂಧಕ ಎಚ್.ಸುಖೇಶ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಸಾಲ ನೀಡುವ ಏಕೈಕ ಸಾರ್ವಜನಿಕ ನಿಗಮ ಎಲ್‌ಐಸಿಯಾಗಿದ್ದು, ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಥೆಯಾಗಿದೆ. ಪ್ರತಿವರ್ಷ ಎಲ್‌ಐಸಿಯಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗುತ್ತಿದ್ದು, ಅದನ್ನು ಯುವಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಅಮರೇಗೌಡ ಮಾತನಾಡಿ, ಎಲ್‌ಐಸಿ ಜೀವ ವಿಮೆಯೊಂದಿಗೆ ಆರೋಗ್ಯ, ಅಪಘಾತ ವಿಮೆ ನೀಡುತ್ತಿರುವುದರಿಂದ ಹೂಡಿಕೆಗೆ ಉತ್ತಮ ಸಂಸ್ಥೆಯಾಗಿದೆ. ಸಂಸ್ಥೆಯ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಎಂಎನ್ ಕಾಲೇಜು ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ, ಉಪನ್ಯಾಸಕರಾದ ಲೇಮಿಕಾ ರಾಣೀ, ಡಾ.ಮಹ್ಮದ್ ಇಲಿಯಾಸ್, ತ್ರಿವೇಣಿ, ಮಂಜುಳಾ ಹಿರೇಮಠ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net