

ಚಿಕ್ಕಮಗಳೂರು: ಎಸ್ಬಿಐ ಮತ್ತು ಎಲ್ಐಸಿ ಸಂಸ್ಥೆಯನ್ನು ಉದ್ಯಮಿ ಅದಾನಿಗೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಎಸ್ಬಿಐ ಬ್ಯಾಂಕ್ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಬಡವರು, ಮಧ್ಯಮ ವರ್ಗದವರ ಬದುಕು ದುಸ್ತರವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತ್ ಜೋಡೋ ಯಾತ್ರೆ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಉದ್ಯಮಿಗಳ ಕೈಗೆ ದೇಶದ ಆಸ್ತಿ ಹೋಗುತ್ತಿದೆ. ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗಿದ್ದು ಬಡವರು ಬಡವರಾಗುತ್ತಿದ್ದಾರೆ. ಶ್ರೀಮಂತರು ಆರ್ಥಿಕವಾಗಿ ಇನ್ನಷ್ಟು ಸದೃಢರಾಗುತ್ತಿದ್ದಾರೆ. ದೇಶದ ಆಸ್ತಿ ರಕ್ಷಣೆಗಾಗಿ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು, ಮಧ್ಯಮ ವರ್ಗದವರು ಕೂಡಿಟ್ಟ ಹಣ ಕೆಲವೇ ವ್ಯಕ್ತಿಗಳ ಪಾಲಾಗಿ ಇಡೀ ದೇಶ ಖಾಸಗೀಕರಣದಲ್ಲಿ ಮುಳುಗಿದೆ. ಅದಾನಿ ಮತ್ತು ಅಂಬಾನಿಗೆ ಇಡೀ ದೇಶವನ್ನು ಒತ್ತೆ ಇಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಎಂಎಲ್ಸಿ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ದೇಶದಲ್ಲಿ ಅದಾನಿ ಸಮೂಹ ಸಂಸ್ಥೆಗಳು ಮುಳುಗಡೆ ಆಗುತ್ತಿರುವ ಸಂದರ್ಭದಲ್ಲಿ ಬಡವರು ಕೂಡಿಟ್ಟ ಹಣ ಮತ್ತು ಎಸ್ಬಿಐನಲ್ಲಿ ಇಟ್ಟಿದ್ದ ಷೇರುಗಳನ್ನು ಕೇಂದ್ರ ಸರ್ಕಾರ ಅದಾನಿಗೆ ಮಾರಾಟ ಮಾಡಲು ಮುಂದಾಗಿದ್ದೇಕೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಪ್ರಮುಖರಾದ ಎ.ಎನ್.ಮಹೇಶ್, ಎಂ.ಎಲ್.ಮೂರ್ತಿ, ರವೀಶ್ ಬಸಪ್ಪ, ಬಸವರಾಜ್, ಶ್ರೀಕಾಂತ್, ಮಹಮದ್ ಹನೀಫ್, ಜಯರಾಜ್ ಅರಸ್, ಎಂ.ಡಿ.ರಮೇಶ್, ಸಂದೇಶ್, ರಸೂಲ್ಖಾನ್, ಪುಟ್ಟೇಗೌಡ, ವೇಣುಗೋಪಾಲ್, ಮಲ್ಲೇಶ್, ವಿನಾಯಕ್ ಇದ್ದರು.