

ಮೈಸೂರು: ಕೇಂದ್ರ ಸರ್ಕಾರದಲ್ಲಿ ಕೃಷಿ, ಕಾರ್ಮಿಕ, ರಕ್ಷಣಾ, ರೈಲ್ವೆ ಸೇರಿದಂತೆ ವಿವಿಧ ಖಾತೆಗಳ ಸಚಿವರಾಗಿ ಜನಪರ ಕಾರ್ಯನಿರ್ವಹಿಸಿದ್ದ ಡಾ.ಬಾಬು ಜಗಜೀವನ ರಾಮ್ ಎಲೆಮರೆ ಕಾಯಿಯಂತೆಯೇ ನಾಯಕನಾಗಿ ಉಳಿದು ಬಿಟ್ಟರು. ಇತರ ನಾಯಕರಿಗೆ ದೊರೆತಷ್ಟು ಮನ್ನತೆ, ಜನಪ್ರಿಯತೆ, ಪುರಸ್ಕಾರಗಳು ಇವರಿಗೆ ಸಿಗಲಿಲ್ಲ ಎಂದು ಮೈವಿವಿ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.
ಮೈವಿವಿ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣೆ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶ, ಸಮಾಜ ಬಾಬೂಜಿ ಅವರನ್ನು ಕಡೆಗಣಿಸಿತು. ಮುಂಚೂಣಿ ನಾಯಕರಿಗೆ ಸಿಕ್ಕಷ್ಟು ಮನ್ನಣೆ ಅವರಿಗೆ ದೊರೆಯಲಿಲ್ಲ. ಇದು ವಿಷಾದನೀಯ ಎಂದರು.
ಜನಪರ ಕಾಳಜಿ ಇರುವ ಕೆಳಸ್ತರದ ಸಮುದಾಯದಿಂದ ಬಂದ ನಾಯಕ ಯಾವುದೇ ಉನ್ನತ ಸ್ಥಾನದಲ್ಲಿ ಇರುವುದನ್ನೂ ಈಗಲೂ ಸಹಿಸಿಕೊಳ್ಳಲ್ಲ. ವ್ಯಕ್ತಿಯ ಸಾಧನೆ, ಕೊಡುಗೆ, ಕೆಲಸ ಪರಿಗಣಿಸಬೇಕು.
ಆದರೆ ಈಗಲೂ ಜಾತಿಯಿಂದಲೇ ಗುರುತಿಸಲಾಗುತ್ತಿದೆ. ಎಷ್ಟೇ ಉತ್ತಮ ಕೆಲಸ ಮಾಡಿದರೂ ಜಾತಿ ಕಾರಣಕ್ಕೆ ನಿರ್ಲಕ್ಷೃ ಮಾಡಲಾಗುತ್ತದೆ. ಈ ಕಾರಣಕ್ಕೆ ಬಾಬೂಜಿ ಅವರಿಗೆ ಪ್ರಧಾನಿ ಹುದ್ದೆಯನ್ನು ತಪ್ಪಿಸಲು ಕುತಂತ್ರ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಕೊಟ್ಟರು. ಅದನ್ನು ಜಾರಿ ಮಾಡಿ ಕಾರ್ಯ ಪ್ರಗತಿ ಸಾಧಿಸಲು ಬಾಬೂಜಿ ಕೊಡುಗೆಯೂ ಇದೆ ಎಂದರು.
ರಾಜ್ಯ ಮಾಹಿತಿ ಆಯುಕ್ತ ಡಾ.ಹರೀಶ್‌ಕುಮಾರ್, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಗಂಗಾಧರ, ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ.ಆರ್.ತಿಮ್ಮರಾಯಪ್ಪ, ಮೈವಿವಿ ಎಸ್‌ಸಿ-ಎಸ್‌ಟಿ ವಿಶೇಷ ಘಟಕದ ಉಪಕುಲಸಚಿವ ಕೆ.ಎನ್.ಮಂಜುನಾಥ ಇತರರಿದ್ದರು.