

ಸಾಗರ: ತಾಲೂಕಿನ ಶರಾವತಿ ಕಣಿವೆಯ ಕರೂರು ಮತ್ತು ಭಾರಂಗಿ ಹೋಬಳಿಗಳಲ್ಲಿ ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರೋಗ ಬಾಧಿತ ತೋಟಗಳಿಗೆ ಸಂಶೋಧಕರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಕಿರಣ್‌ಕುಮಾರ್ ಭಾನುವಾರ ‘ವಿಜಯವಾಣಿ’ ತಿಳಿಸಿದರು.
ತಂಡದಲ್ಲಿ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ, ಡಾ. ಸುದೀಪ್ ಮತ್ತು ನಾಗರಾಜ್ ಸಹಕರಿಸುತ್ತಿದ್ದಾರೆ. ಅಲ್ಲದೆ ಈ ಪ್ರದೇಶದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದಿಂದ ರೋಗದ ಹತೋಟಿಗೆ ಸಾಮೂಹಿಕವಾಗಿ ಔಷಧ ಸಿಂಪಡಿಸುವ ಬಗ್ಗೆ ವಿವರಣೆ ನೀಡಲಾಗುತ್ತಿದೆ. ಮಣ್ಣು ಪರೀಕ್ಷೆಯ ಮಹತ್ವ, ಬೋರ್ಡೊ ದ್ರಾವಣ ಮಿಶ್ರಣ ತಯಾರಿ ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಔಷಧ ಸಿಂಪಡಣೆಗೆ ಸರ್ಕಾರದಿಂದ ಸಹಕಾರ ನೀಡುವುದಾಗಿ ಮಾಹಿತಿ ನೀಡಲಾಗಿದ್ದು ಅಧಿಕೃತ ಸುತ್ತೋಲೆ ಬಂದ ನಂತರ ರೈತರಿಗೆ ತಿಳಿಸಲಾಗುವುದು ಎಂದು ಹೇಳಿದರು.
ವಿಧಾನಸಭೆಯಲ್ಲಿ ಶಾಸಕ ಹರತಾಳು ಹಾಲಪ್ಪ, ಮಲೆನಾಡಿನ ಪ್ರದೇಶಗಳಲ್ಲಿ ಅತಿವೃಷ್ಟಿಯಿಂದಾಗಿ ಅಡಕೆ ತೋಟಗಳಲ್ಲಿ ಎಲೆಚುಕ್ಕೆ ರೋಗದ ಬಗ್ಗೆ ಸಂಶೋಧನೆ ಮತ್ತು ಕೊಳೆ ರೋಗದ ಸಮಸ್ಯೆ ಕುರಿತಂತೆ ರೋಗಕ್ಕೆ ಸಸ್ಯ ಸಂರಕ್ಷಣಾ ನಿಧಿ ಯೋಜನೆ ಅಡಿಯಲ್ಲಿ ಔಷಧ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ಸಂಶೋಧನೆ ಮಾಡಿ ಪರಿಹಾರ ನೀಡಬೇಕು ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಸಮಗ್ರ ಕೀಟ ಮತ್ತು ರೋಗ ನಿಯಂತ್ರಣ ಯೋಜನೆಯಲ್ಲಿ ಔಷಧ ಖರೀದಿಸಲು ಶೇ.90 ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಇತರ ರೈತರಿಗೆ ಶೇ.75 ರಂತೆ ಸಹಾಯಧನ ನೀಡಲಾಗುವುದು. ಮಾರ್ಗಸೂಚಿ ಅನುಸಾರವಾಗಿ ಅಡಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 28 ಸಾವಿರ ಪರಿಹಾರ ನೀಡುವ ಅವಕಾಶವಿದ್ದು ಕಂದಾಯ ಇಲಾಖೆಯ ಮುಖಾಂತರ ವಿತರಿಸಲಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಹಾಗೂ ಕಾಸರಗೋಡಿನ ವಿಜ್ಞಾನಿಗಳು ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳೊಂದಿಗೆ ಶಿಕಾರಿಪುರ, ತೀರ್ಥಹಳ್ಳಿ, ಸಾಗರ ಹಾಗೂ ವಿವಿಧ ಗ್ರಾಮಗಳಲ್ಲಿ ಅಡಕೆ ತೋಟಗಳಿಗೆ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗ ಹಾಗೂ ಅಡಕೆ ಕೊಳೆರೋಗ ಬಾಧಿತ ತಾಲೂಕುಗಳಲ್ಲಿ ತೋಟಗಳನ್ನು ವೀಕ್ಷಿಸಿ ಸಲಹೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.