ಎಲೆಕ್ಷನ್‌ಗೆ ಮುನ್ನವೇ ರು.೩.೫ ಕೋಟಿ ಜಪ್ತಿ

2903klb05
Published on

ಕಲಬುರಗಿ: ಚುನಾವಣೆ ಘೋಷಣೆ ಹೊತ್ತಿಗೆ ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೩.೫೦ ಕೋಟಿ ರೂ. ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.

ಬುಧವಾರ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಿಂದ ಸೇಡಂ ಕಡೆಗೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ೩೫.೫೦ ಲಕ್ಷ ರೂ. ರಿಬ್ಬನಪಲ್ಲಿ ಚೆಕ್ ಪೋಸ್ಟ್ ನಲ್ಲಿ ಪತ್ತೆಯಾಗಿದೆ. ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಮತದಾರರಿಗೆ ಉಡುಗೊರೆಯಾಗಿ ನೀಡಲು ಮಹಾರಾಷ್ಟ್ರದಿಂದ ಆಳಂದ ಕಡೆ ಸಾಗಿಸುತ್ತಿದ್ದ ಸುಮಾರು ೫೪ ಲಕ್ಷದ ಬೆಳ್ಳಿಯ ವಸ್ತು ಸೇರಿ ವಿವಿಧೆಡೆ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ವೇಳೆ ೩.೫೦ ಕೋಟಿ ರೂ. ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಬುಧವಾರ ಸಂಜೆ ಪತ್ರಕರ್ತರಿಗೆ ತಿಳಿಸಿದರು.

ಕಳೆದ ಸಲದ ಚುನಾವಣೆಯಲ್ಲಿ ಇಡಿ ಪ್ರಕ್ರಿಯೆ ಮುಗಿಯುವವರೆಗೂ ಕೇವಲ ೪೦ ಲಕ್ಷ ರೂ. ದಾಖಲೆ ಇಲ್ಲದ ಮೊತ್ತ ವಶಪಡಿಸಿಕೊಳ್ಳಲಾಗಿತ್ತು. ಈಗ ಚುನಾವಣೆ ಘೋಷಣೆ ಹೊತ್ತಿಗೆ ಇಷ್ಟೊಂದು ಹಣ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣ, ಮದ್ಯ ಸಾಗಿಸುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ ೧.೬೦ ಕೋಟಿ ರೂ., ಜೇವರ್ಗಿ ತಾಲೂಕಿನ ಚಿಗರಳ್ಳಿ ಬಳಿ ೫೪ ಲಕ್ಷ, ಕಲಬುರಗಿ ದಕ್ಷಿಣದಲ್ಲಿ ೨೦ ಲಕ್ಷ, ಉತ್ತರದಲ್ಲಿ ೬ ಲಕ್ಷ ಮತ್ತು ಸೇಡಂನಲ್ಲಿ ೩೬ ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಗುರುಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net