

ಹಾಸನ : ಸಮಾಜದಲ್ಲಿರುವ ಸುದ್ದಿ ಮಾಧ್ಯಮಗಳಲ್ಲಿ ಮುದ್ರಣ ಮಾಧ್ಯಮ ಬಹಳ ಶ್ರೇಷ್ಠ ಮಾಧ್ಯಮವಾಗಿದೆ. ಪತ್ರಿಕೆಗಳನ್ನು ಮನಸಿಟ್ಟು ಓದಿದರೆ ನಮ್ಮ ಜೀವಿತಾವಧಿಯ ಕಾಲದವರೆಗೂ ನೆನಪಲ್ಲಿ ಇರುತ್ತದೆ ಎಂದು ಜಿಲ್ಲಾ ಎಲೆಕ್ಟ್ರಾನಿಕ್ಸ್ ರಿಪೇರಿದಾರರ ಸಂಘದ ಅಧ್ಯಕ್ಷರಾದ ರಂಗಸ್ವಾಮಿ ಹೇಳಿದರು.
ನಗರದ ಕಂಬದ ನರಸಿಂಹ ದೇವಾಲಯದ ಆವರಣದಲ್ಲಿ ಜಿಲ್ಲಾ ಎಲೆಕ್ಟ್ರಾನಿಕ್ಸ್ ರಿಪೇರಿದಾರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುದ್ರಣ ಮಾಧ್ಯಮದಲ್ಲಿ ಕರ್ತವ್ಯದಲ್ಲಿ ತೊಡಗಿರುವ ಪತ್ರಕರ್ತರನ್ನು ನಮ್ಮ ಎಲೆಕ್ಟ್ರಾನಿಕ್ಸ್ ರಿಪೇರಿದಾರರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಕೆಲಸಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ನಂತರ ಹಾಸನ್ ಟುಡೇ ಇಂಗ್ಲೀಷ್ ದಿನಪತ್ರಿಕೆ ಸಂಪಾದಕರಾದ ಪ್ರಕಾಶ್ ಹಿಂದೂ ಮಾತನಾಡಿ, ಹಾಸನ ಟುಡೆ ಎನ್ನುವ ಇಂಗ್ಲಿಷ್ ಹೊಸ ದಿನಪತ್ರಿಕೆಯನ್ನು ಹಾಸನದಲ್ಲಿ ಪ್ರಾರಂಭಿಸಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮತ್ತೋರ್ವ ಪ್ರಶಸ್ತಿ ವಿಜೇತ ಪಿ.ಎ. ಶ್ರೀನಿವಾಸ್ ಮಾತನಾಡಿ, ದಿನದಿನವೂ ಅನೇಕ ಸಂಘಗಳು ಹುಟ್ಟಿಕೊಂಡು ಕೆಲ ದಿನಗಳಲ್ಲೆ ಕಣ್ಮರೆಯಾಗಿ ಬಿಡುತ್ತವೆ. ಆದರೆ ಎಲೆಕ್ಟ್ರಾನಿಕ್ಸ್ ರಿಪೇರಿದಾರರ ಸಂಘವು ಹಲವಾರು ವರ್ಷಗಳಿಂದ ಉತ್ತಮ ಕಾರ್ಯ ಚಟುವಟಿಕೆಯೊಂದಿಗೆ ಮುನ್ನಡೆದುಕೊಂಡು ಬರುತ್ತಿದೆ. ಯಾವುದೇ ಸಂಘವಿರಲಿ ಅಲ್ಲಿ ಒಗ್ಗಟ್ಟು ಇದ್ದಾಗ ಮಾತ್ರ ಆ ಸಂಘಟನೆ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಳೆನರಸೀಪುರ ತಾಲೂಕು ಅಧ್ಯಕ್ಷ ಮುರಳೀಧರ ಗುಪ್ತ, ಅರಸೀಕೆರೆ ತಾಲೂಕು ಅಧ್ಯಕ್ಷ ಕುಮಾರ್ ಬಾಣಾವಾರ, ಹಾಸನ ವಿಭಾಗದ ಉಪಾಧ್ಯಕ್ಷ ಮೆಲೋಡಿ ಲಕ್ಷ್ಮಣ, ಅರಕಲಗೂಡಿನ ಧರ್ಮೇಗೌಡ, ಆಲೂರಿನ ಪವನ್, ಹಳೇಬೀಡಿನ ಕುಮಾರ್, ಸಂಚಾಲಕರಾದ ಮಗ್ಗೆ ಕುಮಾರ್, ಪಾರ್ಥ ಸಾರಥಿ, ಪವನ್, ಸಮೀರ್ ಉಲ್ಲ, ಅರವಿಂದ್ ಘೋಷ್, ಪ್ರಸನ್ನಕುಮಾರ್, ಅರವಿಂದ್ ಇತರರು ಉಪಸ್ಥಿತರಿದ್ದರು.