ಎರಡ್ಮೂರು ದಿನಗಳಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ: ಬಿ.ವೈ. ವಿಜಯೇಂದ್ರ

ಎರಡ್ಮೂರು ದಿನಗಳಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ: ಬಿ.ವೈ. ವಿಜಯೇಂದ್ರ
Published on

ಹಾಸನ: ಇನ್ನು ಎರಡು ಮೂರು ದಿನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ಪಕ್ಷದ ಮುಖಂಡರು ಚರ್ಚಿಸಿ ಆಯ್ಕೆ ಮಾಡಲಿದ್ದಾರೆ. ಹಾಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯನ್ನು ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ. ನಾನು ರಾಜ್ಯಾಧ್ಯಕ್ಷ ಆಗುವ ವಿಚಾರ ಚರ್ಚೆ ಆಗಿಲ್ಲ. ಯಾರಿಗೆ ಅಧ್ಯಕ್ಷ ಸ್ಥಾನ ಕೊಟ್ಟರೂ ಸಮರ್ಥವಾಗಿ ನಾವು ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಯಾರೇ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರಾದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಲೋಕಸಭೆ ಚುನಾವಣೆ ಅದರದೇ ಆದ ವಿಷಯದ ಮೇಲೆ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಮನಾದ ನಾಯಕರು ದೇಶದಲ್ಲಿ ಮತ್ತೊಬ್ಬರಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಲಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ಯಾರೆಂಟಿ ವಿಚಾರವಾಗಿ ಮಾತನಾಡಲು ಹೋದರೆ ನಮ್ಮ ಬಗ್ಗೆಯೇ ಅಪಪ್ರಚಾರ ಮಾಡುತ್ತಾರೆ. ಗ್ಯಾರೆಂಟಿ ಕೊಟ್ಟ ರಾಜ್ಯಗಳು ಏನಾಗಿವೆ ಎಂಬುದನ್ನು ನೋಡಿದ್ದೇವೆ. ಅವರ ಸರ್ಕಾರದ ಮಂತ್ರಿಗಳೇ ಚುನಾವಣಾ ಸಂದರ್ಭದಲ್ಲಿ ಗಿಮಿಕ್‌ಗಾಗಿ ಯೋಜನೆ ಭರವಸೆ ನೀಡಿದ್ದೇವೆ ಎಂದಿದ್ದಾರೆ. ಕೆಲವರು ಇವೆಲ್ಲಾ ಲೋಕಸಭಾ ಚುನಾವಣೆವರೆಗು ಮಾತ್ರ ಎನ್ನುತ್ತಿದ್ದಾರೆ. ಕಾಂಗ್ರೆಸ್ ಭರವಸೆ ನೀಡುವ ಸಂದರ್ಭದಲ್ಲಿ ಯಾವುದೇ ಷರತ್ತುಗಳನ್ನ ಹಾಕಿರಲಿಲ್ಲ. ಈಗ ಅನೇಕ ಷರತ್ತುಗಳನ್ನು ಹಾಕಿದೆ. ಮುಂದೆ ಯಾವ ರೀತಿ ಯೋಜನೆಗಳನ್ನು ರೂಪಿಸುತ್ತಾರೆ ನೋಡೋಣ ಎಂದು ಹೇಳಿದರು.

ಕಾಂಗ್ರೆಸ್ ಕೊಟ್ಟಿರುವ ಭರವಸೆ ಈಡೇರಿಸುವ ಭರದಲ್ಲಿ ಜನರಿಗೆ ಆರ್ಥಿಕ ಹೊರೆ ಆಗಬಾರದು. ಒಂದು ಕಡೆ ಹೊರೆ ಇನ್ನೊಂದು ಬರೆ ಹಾಕುವ ಕೆಲಸ ಆಗಬಾರದು. ಪೆಟ್ರೋಲ್ ಸೆಸ್ ಏರಿಕೆ ಮಾಡಬಾರದು. ಹಾಲಿನ ದರ ಏರಿಕೆ ಆದಾಗ ಮುಖ್ಯಮಂತ್ರಿಗಳು ತಡೆದರು. ಆದರೆ ವಿದ್ಯುತ್ ಬೆಲೆ ಏರಿಕೆಯಾದಾಗ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ವಿದ್ಯುತ್ ಬೆಲೆ ಏರಿಕಯನ್ನೂ ಪುನರ್‌ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇದು ಬಿಜೆಪಿಗೆ ಹೊಸದೇನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯವನ್ನು ಸ್ವಾಗತಿಸಿ, ವಿರೋಧ ಪಕ್ಷವಾಗಿ ಯಶಸ್ವಿಯಾಗಿ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಆಡಳಿತ ಪಕ್ಷ ಎಡವಿದಾಗ ಕಿವಿ ಹಿಂಡಿ ಸರಿ ದಾರಿಗೆ ತರುವ ಕೆಲಸ ಕೆಲಸವನ್ನು ಮಾಡುತ್ತೇವೆ ಎಂದರು.

ಸಂಘ- ಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ನೀಡಿರುವ ಭೂಮಿಯ ಬಗ್ಗೆ ಮರುಪರಿಶೀಲನೆ ಮಾಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನಮ್ಮ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಜನಸಾಮಾನ್ಯರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕು. ಸೋಲು ಸಾಮಾನ್ಯ. ನಾವು ಸೋಲನ್ನು ಒಪ್ಪಿಕೊಂಡಿದ್ದೇವೆ. ಮುಂದೆ ಜನರ ಜತೆಗೆ ವಿಶ್ವಾಸದಿಂದ ಇದ್ದು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗಾಯತ ಸಮುದಾಯದ ಕಡೆಗಣನೆ, ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಬಿಜೆಪಿ ಸೋಲಿಗೆ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಒಂದು ಸಮಾಜವನ್ನು ಓಲೈಸುವ ಪಕ್ಷವಲ್ಲ. ಲಿಂಗಾಯತ, ಒಕ್ಕಲಿಗ ಎಲ್ಲಾ ಸಮುದಾಯವನ್ನು ಬಿಜೆಪಿ ಒಗ್ಗೂಡಿಸಿಕೊಂಡು ಹೋಗಿದೆ. ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಸೋಲಿನ ನಂತರ ಈ ರೀತಿಯ ವಿಚಾರಗಳು ಬರುತ್ತವೆ. ನಮ್ಮ ನಾಯಕರು ಸೋಲಿಗೆ ಕಾರಣ ವಿಶ್ಲೇಸುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಮಾಜಿ ಉಪಾಧ್ಯಕ್ಷ ಎಸ್.ಎಂ. ಈಶ್ವರಪ್ಪ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ್‌ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net