ಎರಡ್ಮೂರು ತಿಂಗಳಲ್ಲಿ ಟ್ರಾಮಾ ಕೇರ್ ಕೇಂದ್ರ ಕಾರ್ಯಾರಂಭ

26
Published on

ಮೈಸೂರು: ಉದ್ಘಾಟನೆಗೊಂಡು ಬಳಕೆಯಾಗದ ನಗರದ ಟ್ರಾಮಾ ಕೇರ್ ಸೆಂಟರ್ ಇನ್ನೂ ಎರಡ್ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ದಸರಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ಕಾರಣದಿಂದ ಈ ಸೆಂಟರ್ ಇನ್ನೂ ಆರಂಭವಾಗಿಲ್ಲ. ಇಲ್ಲಿಗೆ ವೈದ್ಯರನ್ನು ನಿಯೋಜಿಸಲಾಗುವುದು. ಜತೆಗೆ, 250 ಹುದ್ದೆಗಳಿಗೆ ಹಣಕಾಸು ಇಲಾಖೆ ಮಂಜೂರಾತಿ ದೊರೆತಿದೆ. ಆದ್ದರಿಂದ ಎರಡ್ಮೂರು ತಿಂಗಳಿನಲ್ಲಿ ಇದು ಪೂರ್ಣಪ್ರಮಾಣದಲ್ಲಿ ಜನರಿಗೆ ಸೇವೆ ನೀಡಲು ಸಿದ್ಧವಾಗಲಿದೆ ಎಂದರು.


ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಕಾಲೇಜಿನ ಅನೇಕ ಕಟ್ಟಡಗಳು ದುಸ್ಥಿತಿಯಲ್ಲಿವೆ. ಇವುಗಳ ದುರಸ್ತಿಗೆ ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡಗಳ ನವೀಕರಣಕ್ಕೆ 89 ಕೋಟಿ ರೂ. ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.


ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 60 ಸಾವಿರ ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 40 ಸಾವಿರ ಜನರು ಇದರ ಲಾಭ ಪಡೆದಿದ್ದಾರೆ. ಜಿಲ್ಲೆಯಲ್ಲಿ 118 ಕೋಟಿ ರೂ. ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ ಎಂದು ತಿಳಿಸಿದರು.


100 ದಿನಗಳಲ್ಲಿ 5 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ ಕಾರ್ಯ ರಾಜ್ಯಾದ್ಯಂತ ನಡೆದಿದೆ. ಕಳೆದ 15 ದಿನಗಳಲ್ಲಿ 85 ಲಕ್ಷ ಕಾರ್ಡ್ ನೀಡಿದ್ದು, ಬಾಕಿ 4.15 ಕೋಟಿ ಕಾರ್ಡ್ ಅನ್ನು ನೀಡಲಾಗುವುದು. ಈ ಕಾರ್ಡ್ ವ್ಯಕ್ತಿಯ ಜೀವಿತಾವಧಿವರೆಗೂ ಮಾನ್ಯತೆ ಇರಲಿದೆ ಎಂದರು.


ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಎರಡು ತಾಲೂಕು ಆಸ್ಪತ್ರೆಯಲ್ಲಿ ಟೆಲಿ ಐಸಿಯು ಸ್ಥಾಪಿಸಲಾಗಿದೆ. ಎಲ್ಲ ತಾಲೂಕಿನಲ್ಲಿ 10 ಹಾಸಿಗೆ ಸೌಲಭ್ಯದ ಐಸಿಯು ತೆರೆಯಲಾಗಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ನೀಡಲು 131 ವೈದ್ಯರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಕ್ಕಿಂತ ಅಸಾಂಕ್ರಾಮಿಕ ರೋಗಗಳಿಗೆ ಹೆಚ್ಚಿನ ಸಾವು ಆಗುತ್ತಿವೆ. ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದ್ರೋಗ ಸಮಸ್ಯೆಯಿಂದ ಅಧಿಕ ಜನರು ಮೃತಪಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದರು.

ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪಮೇಯರ್ ಜಿ. ರೂಪಾ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಅನೇಕ ಸವಾಲುಗಳನ್ನು ಒಡ್ಡಿದ ಕರೊನಾದ ಬಳಿಕ ಆರೋಗ್ಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ದಸರಾ ಆಯೋಜಿಸಲಾಗಿದೆ. ನಾಡಹಬ್ಬ ದಸರೆಗೆ ಇದು ಹೊಸ ಸೇರ್ಪಡೆಯಾಗಿದೆ. ಜತೆಗೆ, ಆರೋಗ್ಯಕ್ಕೆ ಒತ್ತು ನೀಡುವ ಮೂಲಕ ತಾಲೂಕು ಮಟ್ಟದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net